ರಿಮ್ಸ್ ವೈದ್ಯರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆಬಾಲಕನ ಶ್ವಾಸಕೋಶದಲ್ಲಿದ್ದ ಗುಂಡುಸೂಜಿ ಹೊರಕ್ಕೆ

ರಾಯಚೂರು,ಡಿ.೩- ಬಾಲಕನ ಶ್ವಾಸಕೋಶದಲ್ಲಿದ್ದ ಗುಂಡು ಸೂಜಿಯನ್ನು ಬ್ರ್ಯಾಂಕೋಸ್ಕೋಪಿ ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯುವಲ್ಲಿ ನಗರದ ರಿಮ್ಸ್ ಆಸ್ಪತ್ರೆ ತಜ್ಞವೈದ್ಯರ ತಂಡ ಯಶಸ್ವಿಯಾಗಿದೆ.
ಸಿರಿವಾರ ಮೂಲದ ಬಾಲಕನೋರ್ವ ಆಟವಾಡುತ್ತಿದ್ದ ವೇಳೆ ಬಾಯಲ್ಲಿದ್ದ ಗುಂಡು ಸೂಜಿಯನ್ನು ಆಕಸ್ಮಿಕವಾಗಿ ನುಂಗಿದ್ದಾನೆ. ಗಾಬರಿಗೊಂಡ ಪೋಷಕರು ತಕ್ಷಣ ಬಾಲಕನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ವಿವಿಧ ಪರೀಕ್ಷೆಗಳನ್ನು ನಡೆಸಿದ ರಿಮ್ಸ್ ವೈದ್ಯರ ತಂಡ ಬಾಲಕನ ಶ್ವಾಸಕೋಶದ ಬಲಭಾಗದಲ್ಲಿ ಗುಂಡು ಸೂಜಿ ಇರುವುದನ್ನು ಪತ್ತೆ ಹಚ್ಚಿ ನಂತರ ಅಗತ್ಯ ಶಸ್ತ್ರ ಚಿಕಿತ್ಸೆ ಮೂಲಕ ಗುಂಡು ಸೂಜಿ ಶ್ವಾಸಕೋಶದಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಸಿರಿವಾರ ತಾಲ್ಲೂಕಿನ ಮುಚ್ಚುಳ ಕ್ಯಾಂಪ್‌ನ ೧೩ ವರ್ಷದ ಬಾಲಕ ಶಿವಕುಮಾರ್ ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಬಾಯಲ್ಲಿದ್ದ ಗುಂಡು ಸೂಜಿಯನ್ನು ಹಠಾತ್ ನುಂಗಿದ್ದ, ರಿಮ್ಸ್ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಈ ಬಾಲಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಬ್ರ್ಯಾಂಕೊಸ್ಕೋಪಿ ಶಸ್ತ್ರ ಚಿಕಿತ್ಸೆ ಮೂಲಕ ಗುಂಡುಸೂಜಿ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಿಮ್ಸ್‌ನ ತಜ್ಞವೈದ್ಯರ ತಂಡದಲ್ಲಿ ಇಎನ್‌ಟಿಯ ಡಾ. ಅರವಿಂದ ಸಂಘವಿ, ಅರವಳಿಕೆ ವೈದ್ಯ ಡಾ. ಕಿರಣನಾಯಕ, ಡಾ. ಮಲ್ಲಿಕಾರ್ಜುನ್ ಕೆ, ಪಾಟೀಲ್, ಡಾ. ಸಿಂಧು, ಡಾ. ಇಂದುಮಣಿ ಸೇರಿದಂತೆ ನರ್ಸಿಂಗ್ ಅಧಿಕಾರಿ ಅಮರೇಶ್ ಸಕ್ರಿ, ಓಟಿ ತಜ್ಞ ಲಿಂಗರಾಜ್, ಸುಮನ್‌ಕ್ಲಾರಿ, ನಾರಾಯಣ ಶಂಕರ ಸೇರಿದಂತೆ ಇತರರು ಇದ್ದರು ಎಂದು ರಿಮ್ಸ್ ಮಾಹಿತಿ ನೀಡಿದೆ.
ಶಸ್ತ್ರ ಚಿಕಿತ್ಸೆ ಯಶಸ್ವಿಗೆ ರಿಮ್ಸ್ ನಿರ್ದೇಶಕ ಡಾ. ಬಸವರಾಜ್ ಪೀರಾಪುರ್, ಪ್ರಾಂಶುಪಾಲ ಡಾ. ಬಸವರಾಜ್ ಎಂ ಪಾಟೀಲ್, ವೈದ್ಯಕೀಯ ಅಧೀಕ್ಷಕ ಡಾ. ಭಾಸ್ಕರ್ ಕೆಂಪೇಗೌಡ, ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ್, ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ. ನಂದನ್‌ಪಡಶೆಟ್ಟಿ, ಓಟಿ ಮೇಲ್ವಿಚಾರಕಿ ಆಶಾಹುಂಬಿ ಸೂಕ್ತ ಬೆಂಬಲ ನೀಡಿ ಶಸ್ತ್ರ ಚಿಕಿತ್ಸೆ ಯಶಸ್ವಿಗೆ ಸಹಕರಿಸಿದ್ದಾರೆ.
ಬಾಲಕ ಶಿವಕುಮಾರ್ ಮತ್ತು ಕುಟುಂಬದವರು ವೈದ್ಯರ ಕಾರ್ಯಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿ ನಂತರ ಬಾಲಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.