ರಿಮ್ಸ್ ಕರ್ಮಕಾಂಡ : ಲಕ್ಷಾಂತರ ರೂ. ಅತ್ಯಾಧುನಿಕ ಮಂಚ, ಟ್ರೇ ಮೂಲೆ ಗುಂಪು – ಕೆಟ್ಟ ಸಿಟಿ ಸ್ಕ್ಯಾನ್

ರೋಗಿಗಳ ಪಾಲಿಗೆ ನಿತ್ಯ ನರಕ : ಇದ್ದು ಇಲ್ಲವಾದ ಆಡಳಿತ ಮಂಡಳಿ – ಮತದಾರಪ್ರಭು ಆರೋಗ್ಯದ ಬಗ್ಗೆ ಜಿಲ್ಲಾ ಶಾಸಕರು ಸಂಪೂರ್ಣ ನಿರ್ಲಕ್ಷ್ಯ
ರಾಯಚೂರು.ಜು.೨೫- ರಿಮ್ಸ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದ ರೋಗಿಗಳು ಒಂದೆಡೆ ಸಂಘರ್ಷ ನಡೆಸಿದ್ದರೆ, ಮತ್ತೊಂದೆಡೆ ಅತ್ಯಾಧುನಿಕ ಮಂಚ, ಟೇಬಲ್ ಹಾಗೂ ಇನ್ನಿತರ ರೋಗಿಗಳು ಔಷಧಿ ಸಂಗ್ರಹಿಸುವ ಕಬ್ಬಿಣದ ಔಷಧಿ ಡೆಸ್ಕ್‌ಗಳು ರಿಮ್ಸ್ ಆಸ್ಪತ್ರೆಯ ಕೆಲ ಕೋಣೆಗಳಲ್ಲಿ ಸರಿಸುಮಾರು ಕಳೆದ ಒಂದು ವರ್ಷದಿಂದ ಧೂಳು ಮತ್ತು ತುಕ್ಕು ಹಿಡಿಯುವ ರೀತಿಯಲ್ಲಿ ಕೂಡಿಹಾಕಿದ್ದರೆ, ಮತ್ತೊಂದೆಡೆ ಸಿಟಿ ಸ್ಕ್ಯಾನ್ ಕೆಟ್ಟು ರೋಗಿಗಳು ದುಬಾರಿ ವೆಚ್ಚದಲ್ಲಿ ಖಾಸಗಿ ಸಿಟಿ ಸ್ಕ್ಯಾನ್ ಕೇಂದ್ರ ಕದತಟ್ಟುವಂತೆ ಮಾಡಿದೆ.
ಕೋಟ್ಯಾಂತರ ರೂ. ಬೆಲೆ ಬಾಳುವ ಈ ಮಂಚ ಮತ್ತು ಮೆಡಿಸನ್ ಡೆಸ್ಕ್ ಹಾಗೂ ರೋಗಿಗಳ ಉಪಯೋಗಕ್ಕಾಗಿ ಬಳಸುವ ಚಿಕ್ಕ ಪ್ರಮಾಣದ ಟೇಬಲ್‌ಗಳು ಕೇಳುವವರೆ ಇಲ್ಲದೆ, ಕೋಣೆಗಳಲ್ಲಿ ಎಸೆಯಲಾಗಿದೆ. ಅಲ್ಲದೆ, ಆಸ್ಪತ್ರೆಯ ಆವರಣದ ಕಾರಿಡರ್‌ಗಳಲ್ಲಿ ಇವುಗಳನ್ನು ಸಂಗ್ರಹಿಸಲಾಗಿದೆ. ಅತ್ಯಂತ ಆಧುನಿಕ ಮತ್ತು ರೋಗಿಗಳಿಗೆ ಬಹು ಉಪಯೋಗಿಯಾದ ಮಂಚ ಮತ್ತು ಮೆಡಿಸನ್ ಟ್ರೇ ಲಭ್ಯವಿದ್ದರೂ, ರಿಮ್ಸ್ ಆಸ್ಪತ್ರೆಯ ರೋಗಿಗಳು ತುಕ್ಕು ಹಿಡಿದ ಮತ್ತು ಮಂಚದ ಮೇಲಿನ ಬೆಡ್ ಬಹುತೇಕವಾಗಿ ಶಿಥಿಲಾವಸ್ಥೆಯಲ್ಲಿರುವ ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ.
ಬಾಣಂತಿಯರು ಹಾಗೂ ವಯೋವೃದ್ಧರು ಹಳೆ ಮಾದರಿಯ ತುಕ್ಕು ಹಿಡಿದ ಮಂಚಗಳಲ್ಲಿ ಅತ್ಯಂತ ಚಿತ್ರಹಿಂಸೆ ಅನುಭವಿಸುತ್ತಿದ್ದರೂ, ನೂತನ ಮಂಚಗಳನ್ನು ಮಾತ್ರ ರೋಗಿಗಳಿಗೆ ನೀಡದಿರುವುದು ಹಾಗೂ ಸರ್ಕಾರ ಅನುದಾನ ಯಾವ ರೀತಿಯಲ್ಲಿ ಬಳಕೆಯಾಗುತ್ತಿದೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ. ಕೋಣೆ ಮತ್ತು ಆಸ್ಪತ್ರೆಯ ಆವರಣದ ಕಾರಿಡರ್‌ನಲ್ಲಿ ಸಂಗ್ರಹಿಸಿದ ಮಂಚಗಳಲ್ಲಿ ಐಸಿಯು ಅತ್ಯುನ್ನತ ಮಂಚ, ಐಸಿಯು ಡಬಲ್ ಎಲಿವೆಟೆಡ್ ಸಂಪೂರ್ಣ ಸುರಕ್ಷಿತ ಮಂಚ, ಕಾರ್ಡಿಯಾಕ್ ಟೇಬಲ್‌ಗಳು ಇರುವುದು ಕಂಡು ಬಂದಿತ್ತು. ಇಷ್ಟೊಂದು ಸಂಖ್ಯೆಯ ಐಸಿಯು ಅತ್ಯಧುನಿಕ ಮಂಚಗಳನ್ನು ಯಾವ ಉದ್ದೇಶಕ್ಕೆ ತರಲಾಗಿದೆ ಮತ್ತು ಇವುಗಳನ್ನು ಏಕೆ ಬಳಸದೆ, ತುಕ್ಕು ಹಿಡಿಯಲು ಬಿಡಲಾಗಿದೆ ಎನ್ನುವುದು ಮಾತ್ರ ಯಕ್ಷಪ್ರಶ್ನೆಯಾಗಿದೆ.
ಮುಕ್ತ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ೪೦ ರಿಂದ ೭೫ ಸಾವಿರ ಎಂದು ಅಂದಾಜು ಮಾಡಲಾಗುತ್ತದೆ. ಇಷ್ಟೊಂದು ದುಬಾರಿಯ ಈ ಅತ್ಯಾಧುನಿಕ ಮಂಚಗಳು ಸರಿ ಸುಮಾರು ೧ ವರ್ಷದ ಕಾಲದಿಂದ ಧೂಳು ತುಂಬುತಿರುವುದಾದರೂ ಏಕೆ?. ರಿಮ್ಸ್ ಆಸ್ಪತ್ರೆಯಲ್ಲಿರುವ ಐಸಿಯು ಬೆಡ್‌ಗಳ ಸಂಖ್ಯೆ ಎಷ್ಟು?. ಈಗೀರುವ ಮಂಚಗಳು ನಿರುಪಯುಕ್ತಗೊಂಡಿವೆಯೆ?. ಐಸಿಯು ಬೆಡ್‌ಗಳು ನಿರುಪಯುಕ್ತಗೊಂಡಿದ್ದರೆ, ಕಳೆದ ಒಂದು ವರ್ಷ ನಿರುಪಯುಕ್ತ ಮಂಚಗಳಲ್ಲಿ ಐಸಿಯು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ?.
ಹಿಂದುಳಿದ ಮತ್ತು ಮಹತ್ವಕಾಂಕ್ಷಿ ಜಿಲ್ಲೆಯಲ್ಲಿ ಆರೋಗ್ಯ ಮೂಲಭೂತ ಸೌಕರ್ಯ ಅತ್ಯಂತ ದಯಾನೀಯ ಪರಿಸ್ಥಿತಿಯಲ್ಲಿದೆ. ವೈದ್ಯಕೀಯ ಕಾಲೇಜು ಹೊಂದಿದ ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಮೂಲ ಸೌಕರ್ಯಗಳ ಪರಿಸ್ಥಿತಿ ಅತ್ಯಂತ ಗಂಭೀರ ಸ್ವರೂಪದಲ್ಲಿದೆ. ಆದರೆ, ಪ್ರತಿ ವರ್ಷ ಆಸ್ಪತ್ರೆಗೆ ಮೂಲ ಸೌಕರ್ಯಕ್ಕಾಗಿ ಬರುವ ಹಣ ಅಲ್ಲಿಯ ವೈದ್ಯರು, ಗುತ್ತೇದಾರರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಕಮಿಷನ್ ವ್ಯವಹಾರದಲ್ಲಿ ರೋಗಿಗಳು ಸೌಕರ್ಯವಿಲ್ಲದೆ ನರಳುವಂತಹ ಪರಿಸ್ಥಿತಿ ಇದೆ.
ರಿಮ್ಸ್ ಆಸ್ಪತ್ರೆಗೆ ಖರೀದಿಸಲಾದ ಕಾರಿಡರ್ ಮಂಚ, ಮೆಡಿಸನ್ ಟ್ರೇ ಹಾಗೂ ಇನ್ನಿತರ ಸಾಮಾನ್ಯ ಮಂಚಗಳ ಖರೀದಿಗೆ ಸಂಬಂಧಿಸಿ ಸ್ಥಳೀಯ ಪ್ರಭಾವಿ ಜನಪ್ರತಿನಿಧಿ ಮತ್ತು ರಿಮ್ಸ್ ಆಸ್ಪತ್ರೆ ಆಡಳಿತ ಮಧ್ಯದ ಸಂಘರ್ಷವೆ ಇವುಗಳ ಬಳಕೆಗೆ ಅಡ್ಡಿಯಾಗಿವೆಂದು ಹೇಳಲಾಗುತ್ತಿದೆ. ಉಭಯರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ತಕರಾರುಗಳಿಂದಾಗಿ ಸರ್ಕಾರದ ಹಣ ವ್ಯರ್ಥಗೊಳ್ಳುವಂತಹ ಸ್ಥಿತಿಗೆ ದಾರಿ ಮಾಡಿದೆ. ರಿಮ್ಸ್ ಆಸ್ಪತ್ರೆಗೆ ಆಡಳಿತ ಮಂಡಳಿ ಇದ್ದು ಇಲ್ಲದಂತಾಗಿದೆ.
ಆಸ್ಪತ್ರೆಯಲ್ಲಿ ಹತ್ತು, ಹಲವು ಸಮಸ್ಯೆಗಳಿಂದ ರೋಗಿಗಳು ನಿತ್ಯ ತೊಂದರೆಗೆ ಗುರಿಯಾಗುತ್ತಾರೆ. ಆಸ್ಪತ್ರೆಯಲ್ಲಿ ಸರ್ಕಾರದಿಂದ ಪೂರೈಸಲಾದ ಔಷಧಿ ಮತ್ತಿತರ ಸಾಮಾಗ್ರಿಗಳಿದ್ದರೂ, ಎಲ್ಲದಕ್ಕೂ ರೋಗಿಗಳು ಖಾಸಗಿ ಅವರಿಂದ ಖರೀದಿಸಬೇಕು ಮತ್ತು ತಪಾಸಣೆಗೆ ಸಾವಿರಾರು ರೂ. ನೀಡಬೇಕು. ಈ ಸಮಸ್ಯೆ ಒಂದೆಡೆಯಾದರೆ, ಈಗ ರೋಗಿಗಳ ಚಿಕಿತ್ಸೆಗೆ ಬಳಸುವ ಉಪಕರಣಗಳು ಅವರ ಅನುಕೂಲಕ್ಕೆ ಬಾರದಂತೆ ರಿಮ್ಸ್ ಆಸ್ಪತ್ರೆಯ ಆಡಳಿತ ಒಂದು ಮೂಲೆ ಮತ್ತು ಕಾರಿಡರ್‌ಗಳಲ್ಲಿ ಸಂಗ್ರಹಿಸುವ ಮೂಲಕ ರೋಗಿಗಳಿಗೆ ಇದನ್ನು ಬಳಸುವ ಭಾಗ್ಯ ಇಲ್ಲದಂತೆ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಇದ್ದರೂ, ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಧ್ವನಿಯೆತ್ತದಿರುವುದು ಜನರ ಬಗ್ಗೆ ಈ ಜನಪ್ರತಿನಿಧಿಗಳಿಗೆ ಕಾಳಜಿಯಿಲ್ಲವೆ? ಎನ್ನುವ ಅನುಮಾನಕ್ಕೆಡೆ ಮಾಡುತ್ತಿದೆ. ಜನಪ್ರತಿನಿಧಿಗಳಿಗೆ ಮತ್ತು ಅವರ ಕುಟುಂಬದವರಿಗೆ ಅನಾರೋಗ್ಯ ಉಂಟಾದರೆ, ದುಬಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಈ ಜನರ ಪ್ರತಿನಿಧಿಗಳಿಗೆ ತಮ್ಮನ್ನು ಗೆಲ್ಲಿಸಿದ ಮತದಾರರ ಆರೋಗ್ಯದ ಬಗ್ಗೆ ಕನಿಷ್ಟ ಕಾಳಜಿಯಿಲ್ಲದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.
ಒಂದಷ್ಟು ಮಾನವಿಯತೆಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿಯ ಪರಿಸ್ಥಿತಿ ಸುಧಾರಿಸಲು ಕ್ರಮ ಕೈಗೊಳ್ಳುವ ಮೂಲಕ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಮೂಲಭೂತ ಸೌಕರ್ಯ ದೊರೆಯುವಂತೆ ಮಾಡಲು ಕ್ರಮ ಕೈಗೊಳ್ಳದಿರುವ ಇವರ ಶಾಸಕತ್ವದ ಅಧಿಕಾರ ಇರುವುದಾದರೂ ಏಕೆ?. ಕೇವಲ ವರ್ಗಾವಣೆ, ಗುತ್ತೇದಾರಿಕೆ, ಕಮಿಷನ್‌ಗಾಗಿ ಅಧಿಕಾರ ದುರುಪಯೋಗ ಪಡೆಸಿಕೊಳ್ಳದೆ, ರಿಮ್ಸ್ ಆಸ್ಪತ್ರೆಯ ರೋಗಿಗಳ ಸ್ಥಿತಿಗತಿ ಬಗ್ಗೆ ಒಮ್ಮೆ ಗಮನ ಹರಿಸಿ, ಅಲ್ಲಿಯ ಪರಿಸ್ಥಿತಿ ಸುಧಾರಿಸಲು ಕ್ರಮ ಕೈಗೊಳ್ಳುವ ಅಧಿಕಾರ ಸದುಪಯೋಗ ಮಾಡುವರೆ?. ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅವರು ಕೇವಲ ಬೆಂಗಳೂರು ಮತ್ತು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗದೆ, ಇತ್ತ ಜಿಲ್ಲಾವಾರು ಪ್ರವಾಸ ಕೈಗೊಂಡು ಜಿಲ್ಲಾಸ್ಪತ್ರೆಗಳಲ್ಲಿ ಜನಸಾಮಾನ್ಯರ ಚಿಕಿತ್ಸೆ ಪರಿಶೀಲಿಸಲು ಜಿಲ್ಲೆಗೆ ಭೇಟಿ ನೀಡುವರೆ?.