ರಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ : ರೋಗಿಗಳ ಪಾಲಿಗೆ ಚಿತ್ರಹಿಂಸೆ – ಸುಧಾರಣಾ ಕ್ರಮ ಶೂನ್ಯ

ರೋಗಿಗಳ ಸಹಾಯಕರಿಂದಲೆ ಉಪಚಾರ – ಆವರಣದಲ್ಲಿ ಜನರ ಅಕ್ಕಪಕ್ಕದಲ್ಲಿಯೆ ಹಂದಿಗಳ ಸಂಚಾರ
ರಾಯಚೂರು.ಜು.೨೪- ರಿಮ್ಸ್ ಆಸ್ಪತ್ರೆ ನಿರ್ವಹಣೆಗೆ ಸಂಬಂಧಿಸಿ ಪ್ರತಿ ಸಲ ಒಂದಿಲ್ಲೊಂದು ವಿವಾದ ಮತ್ತು ದೂರುಗಳು ಬರುತ್ತಿದ್ದರೂ, ಇದನ್ನು ಸುಧಾರಿಸುವಲ್ಲಿ ಅಲ್ಲಿಯ ಆಡಳಿತ ಮತ್ತು ಸ್ಥಳೀಯ ಸಂಸದರು, ಶಾಸಕರು ಹಾಗೂ ಆಸ್ಪತ್ರೆ ನಿರ್ವಹಣಾ ಸಮಿತಿಯಿಂದ ಯಾವುದೇ ಕ್ರಮ ನಡೆಯದಿರುವುದು ರೋಗಿಗಳು ಪ್ರತಿನಿತ್ಯ ಅನೇಕ ಸಮಸ್ಯೆಗಳಿಗೆ ಗುರಿಯಾಗುವಂತಾಗಿದೆ.
ರಿಮ್ಸ್ ಆಸ್ಪತ್ರೆಯಲ್ಲಿ ನೂರಾರು ಸಂಖ್ಯೆಯ ಒಳ ರೋಗಿಗಳು ಮತ್ತು ನಿತ್ಯ ಅಪಾರ ಸಂಖ್ಯೆಯ ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಆದರೆ, ಇವರ ರೋಗಕ್ಕಿಂತ ಅಲ್ಲಿಯ ಪರಿಸರ ಮತ್ತು ವೈದ್ಯರು ಹಾಗೂ ಸಿಬ್ಬಂದಿಯ ವರ್ತನೆ ಅತ್ಯಂತ ದಾರುಣವಾಗಿರುತ್ತದೆ. ಖಾಸಗಿ ಆಸ್ಪತ್ರೆಗೆ ಹೋಗಲು ಆರ್ಥಿಕ ಸಾಮರ್ಥ್ಯವಿಲ್ಲದೆ, ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರಿಗೆ ಆಸ್ಪತ್ರೆಯಲ್ಲಿ ‘ವೈದ್ಯೋ ನಾರಾಯಣ ಹರಿ‘ ಎಂಬ ಖ್ಯಾತಿ ಹೊಂದಿದ ವೈದ್ಯರು ಮತ್ತು ಸಿಬ್ಬಂದಿ ವರ್ಗ ಮಾಡುವ ಅಪಚಾರ, ರೋಗಿಗಳ ಪಾಲಿಗೆ ಗ್ರಹಚಾರವೆ ಎನ್ನುವಂತಿರುತ್ತದೆ.
ಅತಿ ಸಣ್ಣ ಮಾತ್ರೆಯಿಂದ ಹಿಡಿದು ಭಾರೀ ಮೊತ್ತದ ಚುಚ್ಚು ಮದ್ದುಗಳಿಗೂ ಖಾಸಗಿ ಔಷಧಿ ಅಂಗಡಿಯಿಂದ ತರಲೇಬೇಕು ಎನ್ನುವುದು ಇಲ್ಲಿಯ ಪರೋಕ್ಷ ಕಡ್ಡಾಯವಾಗಿದೆ. ಆಸ್ಪತ್ರೆಯಲ್ಲಿ ದಾಖಲೆಯಾದ ನಂತರ ಶುಶ್ರೂಷಕರು, ವೈದ್ಯರು ಕಾಲ ಕಾಲಕ್ಕೆ ಉಪಚಾರ ಮಾಡದೆ ಇರುವುದರಿಂದ ರೋಗಿಯಿಂದ ಬಂದವರೆ ನಿತ್ಯ ತಮ್ಮ ತಮ್ಮ ಕಾರ್ಯಗಳನ್ನು ಮಾಡಿಕೊಳ್ಳಬೇಕು ಎನ್ನುವ ದಾರುಣ ಪರಿಸ್ಥಿತಿ ಇದೆ. ಇಲ್ಲಿಯ ರಿಮ್ಸ್ ಆಸ್ಪತ್ರೆಯ ಬಹುತೇಕ ವೈದ್ಯರು ಖಾಸಗಿ ಆಸ್ಪತ್ರೆ ನಿರ್ವಹಿಸುತ್ತಾರೆ. ಈ ಖಾಸಗಿ ಆಸ್ಪತ್ರೆಯ ಅವಧಿಯ ನಂತರ ಆಸ್ಪತ್ರೆಗೆ ಭೇಟಿ ನೀಡುವ ವೈದ್ಯರು ಸಿಕ್ಕ ಸಮಯದಲ್ಲಿ ತರಾತುರಿಯಾಗಿ ಕೆಲ ರೋಗಿಗಳನ್ನು ಮಾತ್ರ ನೋಡಿ ಉಳಿದ ರೋಗಿಗಳ ತಪಾಸಣೆ ಶುಶ್ರೂಷಕರಿಗೆ ಬಿಡಲಾಗುತ್ತದೆ. ಯಥಾ ವೈದ್ಯ, ತಥಾ ಶುಶ್ರೂಷಕರು ತಮ್ಮ ಕೆಲಸವನ್ನು ಬೇಕಾಬಿಟ್ಟಿ ನಿರ್ವಹಿಸುತ್ತಿದ್ದಾರೆ.
ಇದರಿಂದಾಗಿ ರೋಗಿಯಿಂದ ಬಂದ ವ್ಯಕ್ತಿಗಳೆ ಅಲ್ಲಿಯ ಬೆಡ್ ಸ್ವಚ್ಛಗೊಳಿಸಬೇಕು. ರೋಗಿಗಳಿಗೆ ಅಗತ್ಯವಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಸೆಲ್ಲೈನ್ ಮತ್ತು ಇನ್ನಿತರ ಕಟ್ಟುಗಳನ್ನು ಸಹಾಯಕರೆ ಕಟ್ಟಿಕೊಂಡು ಆಸ್ಪತ್ರೆಯಲ್ಲಿ ಉಳಿಯಬೇಕು ಎನ್ನುವ ಅಮಾನವಿಯ ವ್ಯವಸ್ಥೆ ರಿಮ್ಸ್ ಆಸ್ಪತ್ರೆಯಲ್ಲಿದೆ. ಈ ಎಲ್ಲಾ ಅವ್ಯವಸ್ಥೆ ರಿಮ್ಸ್ ಆಸ್ಪತ್ರೆ ಡೀನ್ ಅವರಿಗೆ ಗೊತ್ತಿದ್ದರೂ, ಇದನ್ನು ಸುಧಾರಿಸುವ ಕನಿಷ್ಟ ಪ್ರಯತ್ನ ನಡೆಯುತ್ತಿಲ್ಲ. ಖಾಸಗಿ ಔಷಧಿ ಅಂಗಡಿಗಳೊಂದಿಗೆ ಕಮಿಷನ್ ಆಧಾರವಾಗಿ ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧಿಗಳನ್ನು ಬರೆದುಕೊಡಲಾಗುತ್ತಿದೆ ಎನ್ನುವ ದೂರುಗಳಿದ್ದರೂ, ಶಾಸಕರು, ಸಂಸದರು ಈ ಬಗ್ಗೆ ಗಮನ ಹರಿಸುತ್ತಿಲ್ಲ.
ಬಡವರ ಪಾಲಿಗೆ ಸಂಜೀವಿನಿ ಆಗಬೇಕಾಗಿದ್ದ ರಿಮ್ಸ್ ಆಸ್ಪತ್ರೆ ಸಮಸ್ಯೆಗಳ ಆಗರವಾಗಿದ್ದರೂ, ಕೇಳುವವರೆ ದಿಕ್ಕಿಲ್ಲದಂತಾಗಿದೆ. ಬಡವರಿಗಾಗಿ ನಿರ್ಮಿಸಿದ ಈ ಆಸ್ಪತ್ರೆಯ ನಿರ್ವಹಣೆ ಅಲ್ಲಿರುವ ಬಹುತೇಕ ವೈದ್ಯರು, ಸಿಬ್ಬಂದಿ ವರ್ಗಕ್ಕೆ ತಿಂಗಳು ವೇತನದ ಕೇಂದ್ರವಾಗಿ ಮಾರ್ಪಟ್ಟಿದೆ. ಸೇವಾ ಮನೋಭಾವನೆಗಿಂತ ಸುಳಿಗೆ ಭಾವನೆ ಆಧಾರಿಸಿ ಕೆಲಸ ನಡೆಯುತ್ತಿದೆ. ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಜನರ ಪಕ್ಕದಲ್ಲಿಯೆ ಹಂದಿಗಳು ಇರುವ ಸನ್ನಿವೇಶಗಳು ಇದ್ದರೂ, ಇದು ತಮ್ಮ ಆಡಳಿತ ವ್ಯವಸ್ಥೆಗೆ ಅಪಮಾನ ಎಂದು ಭಾವಿಸುವ ಕನಿಷ್ಟ ಮಾನವೀಯತೆ ಇಲ್ಲದ ಆಡಳಿತ ಇಲ್ಲಿ ನಡೆಯುತ್ತದೆ. ಜಿಲ್ಲಾಡಳಿತ ಮತ್ತು ಸರ್ಕಾರ ಈ ಅವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳದಿರುವುದರಿಂದ ಬಡವರು ಇಂತಹ ಅವ್ಯವಸ್ಥೆಯಲ್ಲಿ ಸಾಯಬೇಕು ಮತ್ತು ಉಳ್ಳವರು, ರಾಜಕೀಯ ಪ್ರಭಾವಿಗಳು ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಎನ್ನುವ ವ್ಯವಸ್ಥೆ ನಗರ ಮತ್ತು ಜಿಲ್ಲೆಯಲ್ಲಿದೆ.
ಜಿಲ್ಲಾ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾಡುವ ಕನಿಷ್ಟ ಪ್ರಯತ್ನಗಳು ನಡೆಯದಿರುವುದು ಇಲ್ಲಿಯ ಸಂಸದರು, ಶಾಸಕರ ವೈಫಲ್ಯಕ್ಕೆ ನಿದರ್ಶನವಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನ ಚಿಕಿತ್ಸೆ ಪಡೆಯುವ ಈ ಆಸ್ಪತ್ರೆಯಲ್ಲಿ ನಿರ್ವಹಣೆಗೆ ಕೋಟ್ಯಾಂತರ ರೂ. ಅನುದಾನ ಬಿಡುಗಡೆಗೊಳ್ಳದೆ. ಅಲ್ಲಿಯ ಸಿಬ್ಬಂದಿಗಳು ಮತ್ತು ಕೆಲ ರಾಜಕಾರಣಿಗಳ ಹಿಂಬಾಲಕರು ಸಾಮಾಗ್ರಿ ಪೂರೈಕೆ ಹೆಸರಲ್ಲಿ ಲೂಟಿ ಮಾಡುತ್ತಿರುವ ಅಂಶವೂ ರಿಮ್ಸ್ ಆಸ್ಪತ್ರೆಯಲ್ಲಿವೆ. ಇನ್ನಾದರೂ ಈ ಆಸ್ಪತ್ರೆ ಅಭಿವೃದ್ಧಿಗೆ ಇಲ್ಲಿಯ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಾರೆಯೆ?.