ರಿಮ್ಸ್ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ಔಷಧಿ ಒದಗಿಸಲು ಒತ್ತಾಯ

ರಾಯಚೂರು, ನ, ೨೨- ವಿಕಲಚೇತನರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳನ್ನು ಸಕಾಲಕ್ಕೆ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಸಿದರು.
ವಿಕಲಚೇತನರ ಸಮಾನ ಹಕ್ಕುಗಳ ಸಂರಕ್ಷಣ ಕಾಯ್ದೆ ೨೦೧೬ರ ಅನ್ವಯ ವಿಕಲಚೇತನರಲ್ಲಿ ಒಟ್ಟು ೨೧ ರೀತಿಯ ವಿಕೃತಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ತೀವ್ರ ತರಹದ ವಿಕಲತೆಗಳಲ್ಲಿ, ಹಿಮೋಫಿಲಿಯಾ ವಿಕಲತೆಯಲ್ಲಿ ಒಂದಾಗಿದ್ದು, ಈ ಹಿಮೋಫೀಲಿಯಾ ವಿಕಲತೆ ಹೊಂದಿದಂತಹ ವ್ಯಕ್ತಿಗೆ ಒಂದು ಸಣ್ಣ ಗಾಯವಾದರೂ ಆ ಗಾಯದಿಂದ ದೇಹದಲ್ಲಿರುವ ರಕ್ತವೆಲ್ಲ ನಿರಂತರವಾಗಿ ಸೋರಿಕೆಯಾಗಿ ವ್ಯಕ್ತಿಯು ಸಾಯುವ ಸಂಭವವಿರುತ್ತದೆ. ಇಂತಹ ಸಮಸ್ಯೆಗಳಿಂದ ಅನೇಕ ವಿಕಲಚೇತನರು ಬಳಲುತ್ತಿದ್ದರು. ಸ್ಥಳೀಯ ರಿಮ್ಸ್ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಸರಿಯಾದ ಔಷದಿಗಳು ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಕಲಚೇತನರು ಇಂಜೆಕ್ಷನ್ ವರ್ಷಕ್ಕೆ ೪ ರಿಂದ ೬ ಬಾರಿ ತೆಗೆದುಕೊಳ್ಳಬೇಕಾಗುತ್ತದೆ. ಸ್ಥಳೀಯ ನಿವಾಸಿ ನಾಗರಾಜ ತಂದೆ ಸಿದ್ಧಪ್ಪ ಎಂಬ ಹಿಮೋಫೀಲಿಯಾ ವಿಕಲಚೇತನನು ರಿಮ್ಸ್ ಆಸ್ಪತ್ರೆಯಲ್ಲಿ ಫ್ಯಾಕ್ಟರ್-೯ ಇಂಜೆಕ್ಷನ್ ಸಲುವಾಗಿ ಕಳೆದ ೨ ವರ್ಷಗಳಿಂದ ಅಲೆದಾಡಿ ಕೇಳುತ್ತಿದ್ದರೂ ’ಇಂಜೆಕ್ಷನ್ ಬಂದಿಲ್ಲ, ಇಂಡೆಂಟ್ ಹಾಕಿದ್ದೇವೆ, ಇನ್ನೂ ಬಂದಿಲ್ಲ, ಇಂಡೆಂಟ್ ಕಳಿಸಿದ್ದೇವೆ ಇನ್ನೂ ಬಂದಿಲ್ಲ, ನಾವೇನು ಮಾಡಬೇಕು’ ಎಂದು ಹೇಳುತ್ತಿದ್ದಾರೆಯೇ ಹೊರತು ನಿಜವಾದ ವಾಸ್ತವಾಂಶ ಅರ್ಥವಾಗುತ್ತಿಲ್ಲ. ಈ ರೀತಿಯ ಅತಿ ಜರೂರು ಇಂಜೆಕ್ಷನ್‌ಗಳನ್ನು ರಿಮ್ಸ್ ಆಸ್ಪತ್ರೆಯಲ್ಲಿ ಉಪಲಬ್ದ ಇಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಇಂಜೆಕ್ಷನ್‌ನ್ನು ಹೆಚ್ಚಿನ ರೀತಿಯಲ್ಲಿ ಸಂಗ್ರಹಣೆ ಇಡಲು ರಿಮ್ಸ್ ನಿರ್ದೇಶಕರಿಗೆ ಸೂಚಿಸಬೇಕೆಂದು ಆಗ್ರಹಿಸಿದರು. ಹೀಮೋಫಿಲಿಯಾ ರೋಗಿಗಳಿಗೆ ಅನುಕೂಲವಾಗುವಂತೆ ಫ್ಯಾಕ್ಟರ್-೯ ಇಂಜೆಕ್ಷನ್‌ಗಳನ್ನು ಶೀಘ್ರವೇ ತರಿಸಿಕೊಡಲು ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ಆದೇಶಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಿಲ್ ರಾಜು, ಬಸವರಾಜು, ಗೋಪಾಲ, ನಾಗರಾಜ್ ಸೇರಿದಂತೆ ಉಪಸ್ಥಿತರಿದ್ದರು.