ರಿಪಬ್ಲಿಕ್ ಟಿ.ವಿ. ಮುಖ್ಯಸ್ಥರ ಬಂಧನಕ್ಕೆ ಉಮ್ಮತ್ತೂರು ನಾಗೇಶ್ ಖಂಡನೆ

ಚಾಮರಾಜನಗರ, ನ.8- ಮಹಾರಾಷ್ಟ್ರ ರಾಜ್ಯದ ಮುಂಬೈಯಲ್ಲಿ ಪೊಲೀಸರು ರಿಪಬ್ಲಿಕ್ ಟಿ.ವಿ.ಯ ಪ್ರಧಾನ ಸಂಪಾದಕರಾದ ಅರ್ನಬ್ ಗೋಸ್ವಾಮಿ ಸರ್ವಥಾ ಅವರನ್ನು ಬಂಧಿಸಿರುವುದು ತೀವ್ರ ಖಂಡನೀಯ. ಇದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಡೆದ ಪ್ರಹಾರ ಎಂದು ಚಾಮರಾಜನಗರ ಜಿಲ್ಲಾ ಬಿಜೆಪಿ ವಕ್ತಾರ ಉಮ್ಮತ್ತೂರು ನಾಗೇಶ್ ತೀವ್ರವಾಗಿ ಖಂಡಿಸಿದ್ದಾರೆ.
ಮುಂಬೈ ಪೊಲೀಸರು ಮಹಾರಾಷ್ಟ್ರ ಸರ್ಕಾರ ಕೈಗೊಂಬೆಯಂತೆ ವರ್ತನೆ ಮಾಡುವ ಮೂಲಕ ಕಾನೂನು ಅನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಪತ್ರಕರ್ತರ ಗೋಸ್ವಾಮಿ ಬಂಧನ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ವಾಗಿದೆ. ಈ ಹಿಂದೆ ನಟಿ ಕಂಗನಾ ವಿರುದ್ಧÀ ರಿಪಬ್ಲಿಕ್ ಟಿವಿ ನಡೆಸಿದ ಚರ್ಚೆ, ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಹಿಂದಿನ ಸತ್ಯದ ಅನಾವರಣ, ಹವಾಲಾ ಜಾಲದಲ್ಲಿ ಅರ್ನಬ್ ಇರುವರೆಂಬ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್‍ಸಿಂಗ್ 2018ರ ಆತ್ಮಹತ್ಯಾ ಪ್ರಕರಣವನ್ನು ಉಲ್ಲೇಖಿಸಿ ಹೇಳಿಕೆ ನೀಡಿರುವುದು ಸಂವಿಧಾನ ವಿರೋಧಿ ನಡೆಯಾಗಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಧಮನ ಮಾಡುವ ನೀತಿಯಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ಮಹಾರಾಷ್ಟ್ರ ಸರ್ಕಾರ ಧಮನ ಮಾಡಲು ಮುಂದಾಗಿದೆ ಎಂದು ದೂರಿದರು.
ಸಮಕಾಲೀನ ಸಮಸ್ಯೆಗಳನ್ನು ಅತ್ಯಂತ ಸಮರ್ಥವಾಗಿ ಪ್ರಸಾರ ಮಾಡುತ್ತಿದ್ದ ರಿಪಬ್ಲಿಕ್ ಟಿ.ವಿ. ಮುಖ್ಯಸ್ಥರ ಮೇಲೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸೂಚನೆ ಮೇರೆಗೆ ಪೋಲಿಸರು ಅವರ ಮೇಲೆ ಹಲ್ಲೆ ಮಾಡಿ ಬಂಧಿಸಿರುವುದು ತುಂಬಾ ಹೇಯವಾದ ಕೃತ್ಯ. ಶಿವಸೇನಾ ಮುಖ್ಯಸ್ಥರಾಗಿದ್ದ ಬಾಳಠಾಕ್ರೆ ಅವರು ಮೂಲತಃ ಪತ್ರಕರ್ತರಾಗಿದ್ದು, ಸಾಮ್ನ ಪತ್ರಿಕೆಯ ಸಂಪಾದಕರಾಗಿ ಸಹ ಕಾರ್ಯನಿರ್ವಹಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹರಣದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಆದರೆ ಈಗ ಅವರ ಮಗನಾದ ಉದ್ಧವ್ ಠಾಕ್ರೆ ಅವರು ಅರ್ನಬ್ ಅವರನ್ನು ಬಂಧಿಸಲು ಸೂಚಿಸಿ ತಂದೆÀಗೆ ಅವಮಾನ ಮಾಡಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ಪಕ್ಷವು ತನ್ನ ಪ್ರಭಾವ ಬಳಸಿ ಉದ್ಧವ್ ಅವರ ಮೂಲಕ ತುರ್ತು ಪರಿಸ್ಥಿತಿಯ ಅವಧಿಯ ಪತ್ರಿಕಾ ಸ್ವಾತಂತ್ರ್ಯಕ್ಕೆ ಕೊಡಲಿಯೇಟು ನೀಡುವ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಸೇರುವವರಿಗೆ ಇದೊಂದು ಪಾಠ ಎಂದು ಅವರು ಟೀಕಿಸಿದ್ದಾರೆ.
ಮಹಾರಾಷ್ಟ್ರ ಸರಕಾರವು ಈ ವಿಚಾರದಲ್ಲಿ ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡಿದೆ. ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎಂಬುದನ್ನು ಅಲ್ಲಿನ ಸರಕಾರ ಮರೆತಂತಿದೆ ಎಂದು ಅವರು ಟೀಕಿಸಿದ್ದಾರೆ.
ಅರ್ನಬ್ ಗೋಸ್ವಾಮಿ ಅವರ ಬಂಧನವು ದೇಶದಲ್ಲಿ 1975ರ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ. ತುರ್ತು ಪರಿಸ್ಥಿತಿಯಲ್ಲೂ ಇದೇ ಮಾದರಿಯಲ್ಲಿ ಪತ್ರಕರ್ತರ ಬಂಧನ ಮಾಡಲಾಗಿತ್ತು. ಅಲ್ಲದೆ, ಪತ್ರಿಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಮಹಾರಾಷ್ಟ್ರ ಸರಕಾರದ ಇದೇ ಮಾದರಿಯ ಇಂದಿನ ಕ್ರಮ ಖಂಡನಾರ್ಹ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ಸರಕಾರವು ತಕ್ಷಣವೇ ತನ್ನ ನಿರ್ಧಾರವನ್ನು ಮರು ವಿಮರ್ಶಿಸಿ ಅರ್ನಬ್ ಗೋಸ್ವಾಮಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಉಮ್ಮತ್ತೂರು ನಾಗೇಶ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.