ರಿಚಾ ಚಡ್ಡ ಹೇಳಿಕೆಗೆ ಅಕ್ಷಯ್ ಖಂಡನೆ

ಮುಂಬೈ, ನ ೨೫- ಗಾಲ್ವಾನ್ ಕುರಿತು ಬಾಲಿವುಡ್ ನಟಿ ರಿಚಾ ಚಡ್ಡಾ ಅವರ ಪ್ರತಿಕ್ರಿಯೆಯನ್ನು ನಟ ಅಕ್ಷಯ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ಭಾರತೀಯ ಸೇನೆಯ ಹಲವು ಯೋಧರು ಹುತಾತ್ಮರಾಗಿದ್ದ ೨೦೨೦ರ ಗಾಲ್ವಾನ್ ಘರ್ಷಣೆ ಕುರಿತು ಬಾಲಿವುಡ್ ನಟಿ ರಿಚಾ ಚಡ್ಡಾ ಮಾಡಿದ್ದ ಟ್ವೀಟ್ ನ್ನು ಅಕ್ಷಯ್ ಶೇರ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಷಯ್ ಕುಮಾರ್ ತಮ್ಮ ಟ್ವೀಟರ್ ಖಾತೆಯಲ್ಲಿ ರಿಚಾ ಚಡ್ಡಾರ ಫೋಟೋದೊಂದಿಗೆ ಅವರ ಹೇಳಿಕೆಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಇದನ್ನು ನೋಡಿ ನೋವಾಯಿತು. ನಮ್ಮ ಸೇನಾಪಡೆಗಳಿಗೆ ಎಂದಿಗೂ ನಾವು ಕೃತಜ್ಞತೆ ಸಲ್ಲಿಸದ ರೀತಿಯ ಹೇಳಿಕೆ ನೀಡಬಾರದು ಎಂದು ಅವರು ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರವನ್ನು ಪಡೆಯಲು ಸೇನೆ ಯಾವಾಗಲೂ ಸಿದ್ಧವಾಗಿರುತ್ತದೆ ಎಂಬ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆ ಕುರಿತು ರಿಚಾ ಚಡ್ಡಾ ಮಾಡಿದ್ದ ಟ್ವೀಟ್ ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಉಪೇಂದ್ರ ದ್ವಿವೇದಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರಿಚಾ, “ಗಾಲ್ವಾನ್ ಹಾಯ್ ಎನ್ನುತ್ತಿದೆ” ಎಂದು ಟ್ವೀಟ್ ಮಾಡಿ ಸೇನೆಗೆ ಅವಮಾನಿಸಿದ್ದಾರೆ ಎಂದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.
ಸಾಮಾಜಿಕ ತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ, ಬೆನ್ನಲ್ಲೇ ಆಕೆ ಸೈನಿಕರು ಮತ್ತು ದೇಶದ ಕ್ಷಮೆ ಯಾಚಿಸಿದ್ದಾರೆ. ಇದು ಎಂದಿಗೂ ನನ್ನ ಉದ್ದೇಶವಾಗಿರದಿದ್ದರೂ, ವಿವಾದಕ್ಕೆ ಕಾರಣವಾಗುತ್ತಿರುವ ೩ ಪದಗಳಿಂದ ಯಾರಿಗಾದರೂ ಮನನೊಂದಿದ್ದರೆ ಅಥವಾ ನೋಯಿಸಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ. ಉದ್ದೇಶಪೂರ್ವಕವಾಗಿ ನನ್ನ ಮಾತುಗಳು ಈ ಭಾವನೆಯನ್ನು ಪ್ರಚೋದಿಸಿದರೆ ಅದು ನನಗೆ ದುಃಖವನ್ನು ತರುತ್ತದೆ. ಸೇನೆಯಲ್ಲಿ ನನ್ನ ಸಹೋದರರು, ಅದರಲ್ಲಿ ನನ್ನ ಸ್ವಂತ ಅಜ್ಜ ಪ್ರಮುಖ ಪಾತ್ರ ವಹಿಸಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಆಗಿ, ಅವರು ೧೯೬೦ ರ ದಶಕದಲ್ಲಿ ಇಂಡೋ-ಚೀನಾ ಸಮರದಲ್ಲಿ ಕಾಲಿಗೆ ಬುಲೆಟ್ ತಾಗಿಸಿಕೊಂಡಿದ್ದರು. ನನ್ನ ಮಾಮಾಜಿ ಪ್ಯಾರಾಟ್ರೂಪರ್ ಆಗಿದ್ದರು. ಅದು ನನ್ನ ರಕ್ತದಲ್ಲಿದೆ”ಎಂದು ಟ್ವೀಟ್ ಮಾಡಿದ್ದಾರೆ.