ರಿಕ್ಷಾ-ಕಾರು ಡಿಕ್ಕಿ ಚಾಲಕ ಮೃತ್ಯು

ಬಂಟ್ವಾಳ, ಮಾ.೨೭- ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿ ಉರುಳಿಬಿದ್ದ ಪರಿಣಾಮ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮಾಣಿ – ಪುತ್ತೂರು ರಸ್ತೆಯ ಕೊಡಾಜೆಯ ಮಠ ಎಂಬಲ್ಲಿ ಇಂದು (ಶನಿವಾರ) ಬೆಳಗ್ಗೆ ಸಂಭವಿಸಿದೆ.
ಆಟೋ ಚಾಲಕ, ಕೊಡಾಜೆ ಪಂತಡ್ಕ ನಿವಾಸಿ ಹಮೀದ್ ಯಾನೆ ಅಮ್ಮಿ(೩೫) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋ ರಿಕ್ಷಾದ ಹಿಂಬದಿಯಲ್ಲಿ ಕುಳಿತಿದ್ದ ಹಮೀದ್ ಅವರ ಪತ್ನಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಣಿ ಕಡೆಯಿಂದ ಬರುತ್ತಿದ್ದ ಆಟೋ ರಿಕ್ಷಾ ಮಾಣಿಯಿಂದ ಪುತ್ತೂರು ಕಡೆ ಸಂಚರಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಬ್ರೇಕ್ ವೈಫಲ್ಯಕ್ಕೀಡಾಗಿದ್ದರಿಂದ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದ್ದು, ಅದರಲ್ಲಿದ್ದವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.