ರಿಂಗ್ ರಸ್ತೆ ಉತ್ತನಹಳ್ಳಿ ಕ್ರಾಸ್ ಬಳಿ ವಾಹನ ಡಿಕ್ಕಿ ಹೊಡೆದು ಚಿರತೆ ಸಾವು

ಮೈಸೂರು: ಜ.08:- ನಗರದ ರಿಂಗ್ ರಸ್ತೆಯ ಉತ್ತನಹಳ್ಳಿ ಕ್ರಾಸ್ ಬಳಿ ಶುಕ್ರವಾರ ತಡರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಚಿರತೆಯೊಂದು ಮೃತಪಟ್ಟಿದೆ.
ಸುಮಾರು 6 ವರ್ಷದ ಗಂಡು ಚಿರತೆ ರಸ್ತೆ ದಾಟುವ ಯತ್ನದಲ್ಲಿದ್ದಾಗ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿತ್ತು. ಮಾಹಿತಿ ತಿಳಿದ ತಕ್ಷಣ ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಚಿರತೆ ಮೃತಪಟ್ಟಿದೆ.
ಮೃತ ಚಿರತೆಯ ಶವವನ್ನು ಪ್ರಮಾಣಿತ ಕಾರ್ಯಾಚರಣೆಯ ವಿಧಾನದ ಪ್ರಕಾರ ವಿಲೇವಾರಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಚಾಮುಂಡಿ ಬೆಟ್ಟದ ಭಾಗದಲ್ಲಿರುವ ಚಿರತೆಗಳು ಆಹಾರ ಅರಸಿ ರಿಂಗ್ ರಸ್ತೆ ದಾಟಿ ಬರುವುದು ಹೊಸದಲ್ಲವಾದರೂ ಚಿರತೆ ವಾಹನ ಡಿಕ್ಕಿಯಾಗಿ ಮೃತಪಟ್ಡಿರುವುದು ಇದೇ ಮೊದಲು.