ರಾ.ಹೆದ್ದಾರಿ ಅಸಮರ್ಪಕ ಕಾಮಗಾರಿ ವಿರುದ್ಧ ಆಕ್ರೋಶ


ಕುಂದಾಪುರ, ಎ.೧೯- ರಾಷ್ಟ್ರೀಯ ಹೆದ್ದಾರಿ ೬೬ರ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡ ನವಯುಗ ಕಂಪೆನಿ ತರಾತುರಿಯಲ್ಲಿ ಕೆಲಸ ಮುಗಿಸಿ, ಹೊರಡಲು ಮುಂದಾಗಿದೆ. ಆದರೆ ಇಲ್ಲಿನ ಚರಂಡಿ, ಕ್ರಾಸಿಂಗ್ ಸಹಿತ ಅನೇಕ ಸಮಸ್ಯೆಗಳು ಮಾತ್ರ ಹಾಗೇ ಉಳಿದುಕೊಂಡಿವೆ. ಆದ್ದರಿಂದ ಈ ಕುರಿತು ಜಿಲ್ಲಾಧಿಕಾರಿ ಹಾಗೂ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿಗಳು ಸ್ವತಹ ಭೇಟಿ ನೀಡಿ ಪರಿಹರಿಸಬೇಕು ಎಂಬ ಹಕ್ಕೊತ್ತಾಯವನ್ನು ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತಿ ಸಮಿತಿಯ ನೇತೃತ್ವದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಡಲಾಯಿತು.
ಸಮಿತಿಯ ಪ್ರಮುಖರಾದ ಕಿಶೋರ್ ಕುಮಾರ್ ಮಾತನಾಡಿ, ಕುಂದಾಪುರ ಫ್ಲೈಓವರ್ ಕಾಮಗಾರಿಯ ಅವ್ಯವಸ್ಥೆಗೆ ನಮ್ಮೆಲ್ಲರ ನಿರ್ಲಕ್ಷ್ಯವೇ ಕಾರಣ ಆಗಿದೆ. ಮಾತ್ರವಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಈವರೆಗೆ ನಮ್ಮ ಹಾಗೂ ಕಾಮಗಾರಿ ವಹಿಸಿಕೊಂಡೆ ಗುತ್ತಿಗೆ ಸಂಸ್ಥೆಯ ಮಧ್ಯವರ್ತಿಯಾಗಿ ಮಾತ್ರ ಕೆಲಸ ಮಾಡಿದ್ದು ಬಿಟ್ಟರೆ, ಬೇರೇನು ಮಾಡಿಲ್ಲ. ಈ ಬಗ್ಗೆ ಈಗಲೂ ಎಚ್ಚೆತ್ತು ಕೊಳ್ಳದಿದ್ದರೆ, ಮತ್ತೆ ಯಾವತ್ತೂ ಈ ಅವ್ಯವಸ್ಥೆಯನ್ನು ಸರಿಪಡಿಸಿ ಕೊಳ್ಳಲು ಸಾಧ್ಯವೇ ಇಲ್ಲ ಎಂದರು. ಸಮಿತಿಯ ಸಂಚಾಲಕ ಕೆಂಚನೂರು ಸೋಮಶೇಖರ್ ಶೆಟ್ಟಿ, ವಕೀಲರಾದ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಸ್ಥಳೀಯರಾದ ಮಾಧವ ನಾಯಕ್, ಸುದೀಪ್, ಶ್ರೀಪತಿ ಆಚಾರ್ಯ, ಮಹೇಶ್ ಶೆಣೈ, ವೆಂಕಟೇಶ್, ಜಯಾನಂದ ಖಾರ್ವಿ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೋಟ ಇಬ್ರಾಹಿಂ ಸಾಹೇಬ್, ಪುರಸಭೆ ಸದಸ್ಯ ಗಿರೀಶ್, ಚಂದ್ರಶೇಖರ ಖಾರ್ವಿ, ಅಬ್ಬು ಮೊಹಮ್ಮದ್, ರಾಜೇಶ್ ಕಾವೇರಿ, ವಿಕಾಸ್ ಹೆಗ್ಡೆ, ಹರಿಪ್ರಸಾದ್ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಸಾಸ್ತಾನ ಸಮಿತಿಯ ಪ್ರತಾಪ್ ಶೆಟ್ಟಿ, ನಾಗರಾಜ್ ಗಾಣಿಗ, ಪ್ರಶಾಂತ್ ಶೆಟ್ಟಿ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್, ವಿವೇಕ್ ನಾಯಕ್, ಪುರಸಭೆ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕರು ಪಾಲ್ಗೊಂಡಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು.