ರಾ. ಹೆದ್ದಾರಿಯಲ್ಲಿ ಹೊಂಡ: ಡಿವೈಡರ್‌ ಮೇಲೇರಿದ ಬಸ್‌!


ಕುಂದಾಪುರ, ಜು.೧೭- ಸುಮಾರು ಎರಡು ಅಡಿ ಹೊಂಡಕ್ಕೆ ಬಸ್ ಇಳಿದ ಪರಿಣಾಮ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು 300 ಮೀಟರ್ ದೂರ ಡಿವೈಡರ್ ಮೇಲೆ ಚಲಿಸಿದ ಘಟನೆ ತಾಲೂಕಿನ ಕುಂಭಾಸಿ ಸಮೀಪದ ಕೊರವಡಿ‌ ಕ್ರಾಸ್ ಬಳಿ ಶನಿವಾರ ನಡೆದಿದೆ.
ಮುಂಬೈನಿಂದ ಮಂಗಳೂರಿನತ್ತ ಸಾಗುತ್ತಿದ್ದ ಆನಂದ್ ಹೆಸರಿನ ಖಾಸಗಿ ಬಸ್ ಕುಂಭಾಸಿ ಸಮೀಪದ ಕೊರವಡಿ ಕ್ರಾಸ್ ಬಳಿ ಹೆದ್ದಾರಿ ಹೊಂಡಕ್ಕೆ ಬಸ್ ಟಯರ್ ಇಳಿದಾಗ ಬಸ್ ಚಾಲಕನ‌ ನಿಯಂತ್ರಣ ಕಳೆದುಕೊಂಡು ಸುಮಾರು 300 ಮೀಟರ್ ದೂರ ಡಿವೈಡರ್ ಏರಿ ಸಾಗಿದ್ದು ಚಾಲಕನ ಜಾಗರೂಕತೆಯಿಂದಾಗಿ ಪಲ್ಟಿಯಾಗುವುದು ತಪ್ಪಿದಂತಾಗಿದೆ. ಹೀಗೆ ಅಪಾಯದಲ್ಲಿ ಸಾಗಿದ ಬಸ್ ಕನ್ನುಕೆರೆ ಮಸೀದಿ ಎದುರು ಡಿವೈಡರ್ ಏರಿ ನಿಂತಿದೆ. ಬಸ್ಸಿನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.