ರಾಹುಲ್ ಸಮ್ಮತಿಪಡೆದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ

ಜೈಪುರ,ಸೆ.೨೧- ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ನಿರ್ಧರಿಸಿದರೆ ಶಾಸಕರನ್ನು ದೆಹಲಿಗೆ ಬರಮಾಡಿಕೊಳ್ಳುವುದಾಗಿ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಹೇಳಿದ್ದಾರೆ. ತಾವು ಸ್ಪರ್ಧಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದಕ್ಕೆ ಮುಂಚಿತವಾಗಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರ ಒಪ್ಪಿಗೆ ಪಡೆಯುವುದಾಗಿಯೂ ಹೇಳಿದ್ದಾರೆ.
ಭಾರತ್ ಜೋಡಿಸಿ ಯಾತ್ರೆ ನಡೆಯುತ್ತಿದ್ದು, ಕೇರಳಕ್ಕೆ ತೆರಳಿ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಅವರ ಮನವೊಲಿಸುವ ಪ್ರಯತ್ನವನ್ನು ಮಾಡಲಾಗುವುದು ಎಂದು ತಮ್ಮ ನಿವಾಸದಲ್ಲಿ ನಡೆದ ಶಾಸಕಾಂಗ ಪಕ್ಷ ಸಭೆಯ ನಂತರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರತಾಪ್‌ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಅಶೋಕ್ ಗೆಲ್ಹೋಟ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ ಶಾಸಕರಿಗೆ ದೆಹಲಿಗೆ ಬರುವಂತೆ ಸಂದೇಶ ಸಿಗಲಿದೆ ಎಂದು ಹೇಳಿದರು.
ಅ. ೧೭ ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸೆ. ೨೪ ರಿಂದ ೩೦ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮನಿರ್ದೇಶನ ವಾಪಸ್ ಪಡೆಯಲು ಅ. ೮ ಕೊನೆಯ ದಿನವಾಗಿದೆ. ಅ. ೧೯ ರಂದು ಫಲಿತಾಂಶ ಹೊರ ಬೀಳಲಿದೆ.
ನಾಮಪತ್ರ ಸಲ್ಲಿಸಲು ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಶಶಿತರೂರ್, ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಸ್ಪರ್ಧಿಸಲು ಅನುಮತಿ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಭಾರತ್ ಜೋಡೊಯಾತ್ರೆ ಕೈಗೊಂಡಿರುವ ರಾಹುಲ್‌ಗಾಂಧಿ ಅವರ ಮನವೊಲಿಕೆಗೂ ಪ್ರಯತ್ನಗಳು ಮುಂದುವರೆದಿವೆ. ಆದರೆ, ಈಗಾಗಲೇ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಶಶಿತರೂರ್ ಮತ್ತು ಅಶೋಕ್ ಗೆಲ್ಹೋಟ್ ಸ್ಪರ್ಧಿಸುವುದು ಖಚಿತವಾಗಲಿದೆ.