ರಾಹುಲ್ ಸಂಸತ್ ಸದಸ್ಯತ್ವ ನಾಳೆ ತೀರ್ಮಾನ

ನವದೆಹಲಿ,ಆ. ೬-ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ ನಂತರ
ಅನರ್ಹತೆ ಆದೇಶ ವಾಪಸಾತಿ ಸಂಬಂದ ಲೋಕಸಭಾ ಕಾರ್ಯದರ್ಶಿ ನಾಳೆ ಪರಿಶೀಲನೆ ನಡೆಸಲಿದ್ದಾರೆ.ಕಾಂಗ್ರೆಸ್ ಪಕ್ಷ ಸಲ್ಲಿರುವ ಎರಡು ಪತ್ರಗಳನ್ನು ಆಧರಿಸಿ ಹಾಗು ಸುಪ್ರೀಂಕೋರ್ಟ್ ತೀರ್ಪಿನ ಪ್ರತಿ ಪರಿಶೀಲಿಸಿ ಲೋಕಸಭೆಯ ಕಾರ್ಯದರ್ಶಿ ಅವರು ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಮರುಸ್ಥಾಪಿಸುವ ಕುರಿತು “ಮೆರಿಟ್ ಆಧಾರಿತ” ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಕಾಂಗ್ರೆಸ್ ನೀಡಿರುವ ಪತ್ರಗಳನ್ನು ಪರಿಶೀಲನೆ ನಾಳೆ ನಡೆಸಲಾಗುವುದು ಆ ನಂತರ ಅರ್ಹತೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಲೋಕಸಭಾ ಸಚಿವಾಲಯ ತಿಳಿಸಿದೆ.
ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ನೀಡುತ್ತಿದ್ದಂತೆ ಅನರ್ಹ ಮಾಡಲು ತೋರಿದ ಆತುರವನ್ನು ಈಗ ಅದೇ ಅನರ್ಹತೆ ವಾಪಸ್
ಪಡೆಯಲು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಜೈರಾಮ್ ರಮೇಶ್, “ರಾಹುಲ್ ಗಾಂಧಿ ಅವರನ್ನು ಸೂರತ್‌ನ ಸೆಷನ್ಸ್ ನ್ಯಾಯಾಲಯ ದೋಷಿ ಎಂದು ಘೋಷಿಸಿದ ೨೬ ಗಂಟೆಗಳ ನಂತರ, ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಅಧಿಸೂಚನೆ ಹೊರಡಿಸಲಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಸಮ್ಮತವಲ್ಲದ ಶಿಕ್ಷೆಗೆ ತಡೆ ನೀಡಿ ೩೬ ಗಂಟೆಗಳು ಕಳೆದಿವೆ. ಯಾಕೆ ಇನ್ನೂ ತೆರವು ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಅವರು ಲೋಕಸಭಾ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದಂತೆಯೇ “ಮಿಂಚಿನ ವೇಗದಲ್ಲಿ” ಮರುಸೇರ್ಪಡೆಯಾಗುವಂತೆ ಮನವಿ ಮಾಡಿದ್ದಾರೆ.”ನನಗೆ ಯಾವುದೇ ಸಂದೇಹವಿಲ್ಲ. ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ಮರುಸೇರ್ಪಡೆ ಮಾಡಲು ನ್ಯಾಯಾಲಯದ ಆದೇಶವನ್ನು ಅನುಸರಿಸಲು ನಾವು ಮಾಡಿದ ಪ್ರಯತ್ನಗಳನ್ನು ವಿವರಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.