ರಾಹುಲ್ ವಿರುದ್ಧ ಪಿಣರಾಯಿ ವಾಗ್ದಾಳಿ

ಕೋಝಿಕೋಡ್,ಏ.೨೦-ಭ್ರಷ್ಟಾಚಾರದ ಆರೋಪದ ಹೊರತಾಗಿಯೂ ಕೇರಳ ಮುಖ್ಯಮಂತ್ರಿಯನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿಲ್ಲ ಯಾಕೆ ಎನ್ನುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದಾರೆ.
ಎಲ್‌ಡಿಎಫ್ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ರಾಹುಲ್ ಗಾಂಧಿ ಅವರ ಅಜ್ಜಿ ದೇಶವನ್ನು ಆಳುತ್ತಿದ್ದಾಗ ತುರ್ತು ಪರಿಸ್ಥಿತಿಯ ಸಮಯದಲ್ಲಿ ಒಂದೂವರೆ ವರ್ಷಗಳ ಕಾಲ ನಮ್ಮನ್ನು ಜೈಲಿಗೆ ಹಾಕಿದ್ದರು” ಎಂದು ತಿರುಗೇಟು ನೀಡಿದ್ದಾರೆ.
“ನಾವು ಯಾವುದೇ ವಿಚಾರಣೆ ಎದುರಿಸದವರಲ್ಲ. ನಿಮ್ಮ ಹಿಂಬಾಲಕರೇ ರಾಜಕೀಯ ದ್ವೇಷದ ಭಾಗವಾಗಿ ಕಪೋಲಕಲ್ಪಿತ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ನಂತರ ಅದನ್ನು ವಿಚಕ್ಷಣಾ ಇಲಾಖೆ ವಜಾಗೊಳಿಸಿದ್ದನ್ನು. ಸಿಬಿಐ ಪ್ರಶ್ನಿಸಿತ್ತು ಮತ್ತು ಅವರೂ ಅದೇ ತೀರ್ಮಾನಕ್ಕೆ ಬಂದರು ಎಂದು ಹೇಳಿದ್ದಾರೆ.
ಆಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ತಪ್ಪು ಭ್ರಷ್ಟಾಚಾರ ಕಂಡಿದ್ದರೆ ತನಿಖೆ ನಡೆಸಬಹುದಿತ್ತು, ಆಗ ಮಾತನಾಡದೆ ಲೋಕಸಭಾ ಚುನಾವಣೆಯಲ್ಲಿ ಈಗ ಯಾಕೆ ವಿಷಯ ಪ್ರಸ್ತಾಪ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಜೈಲು, ತನಿಖೆ ಅಥವಾ ಕೇಂದ್ರೀಯ ಸಂಸ್ಥೆಗಳ ಬಗ್ಗೆ ಮಾತನಾಡಬೇಡಿ, ಸಿಎಎ ವಿರುದ್ಧ ಬಲವಾದ ನಿಲುವು ತೆಗೆದುಕೊಳ್ಳಲು ವಿಫಲರಾಗಿದ್ದೀರಿ ಎಂದು ರಾಹುಲ್ ಗಾಂಧಿ ವಿರುದ್ದ ನೇರವಾಗ್ದಾಳಿ ನಡೆಸಿದ್ದಾರೆ.
ದೇಶಾದ್ಯಂತ ಸಿಎಎ ಕುರಿತು ಆಕ್ರೋಶ ವಕ್ತವಾಗುತ್ತಿದ್ದ ಸಮಯದಲ್ಲಿ ರಾಷ್ಟ್ರವ್ಯಾಪಿ ಸಂಚಲನ ಉಂಟಾದಾಗ ಕಾಂಗ್ರೆಸ್ ಎಲ್ಲಿತ್ತು ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಈ ವಿಷಯವನ್ನು ನೀವು ಯಾಕೆ ಪ್ರಸ್ತಾಪಿಸಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಕೇರಳದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ”ಕೇರಳ ಮುಖ್ಯಮಂತ್ರಿಯನ್ನು ಏಕೆ ವಿಚಾರಣೆಗೊಳಪಡಿಸುತ್ತಿಲ್ಲ, ತನಿಖಾ ಸಂಸ್ಥೆಗಳುವಶಕ್ಕೆ ತೆಗೆದುಕೊಳ್ಳುತ್ತಿಲ್ಲ, ಏಕೆ ಪ್ರಕರಣ ದಾಖಲಿಸುತ್ತಿಲ್ಲ. ದೇಶದ ಇಬ್ಬರು ಮುಖ್ಯಮಂತ್ರಿಗಳು ಜೈಲಿನಲ್ಲಿದ್ದಾರೆ. ಅವರಿಗೆ ಒಂದು ನ್ಯಾಯ ಇವರಿಗೆ ಮತ್ತೊಂದು ನ್ಯಾಯನಾ ಎಂದಿದ್ದರು.