
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಎಐಸಿಸಿ ಮುಖಂಡ ರಾಹುಲ್ ಗಾಂಧಿ ವಿರುದ್ದ ಬಿಜೆಪಿ ನಾಯಕರು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಹೇಳಿದ್ದಾರೆ
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ನಿನ್ನೆ ನಗರದಲ್ಲಿ ತುಂಬಾ ಹಗುರವಾಗಿ ಮಾತನಾಡಿರುವುದು ಸರಿ ಅಲ್ಲ.
ರಾಹುಲ್ ಗಾಂಧಿಯವರನ್ನು ಇಡೀ ದೇಶ ಮೆಚ್ಚಿಕೊಳ್ಳುತ್ತಿದೆ. ಭಾರತ್ ಜೋಡೋ ಯಾತ್ರೆಯಿಂದಾಗಿ ಅವರು ದೇಶದ ಜನರ ಆಶಾಕಿರಣ ಆಗಿ ಹೊರಹೊಮ್ಮಿದ್ದಾರೆ.
ಅಧಿಕಾರಕ್ಕೆ ಬಂದಾಗಿನಿಂದ ದೇಶದ ಜನರ ಮಧ್ಯೆ ದ್ವೇಷ ಬಿತ್ತುತ್ತಿದ್ದ ಕೇಂದ್ರ ಸರ್ಕಾರದ ರಾಜಕಾರಣದಿಂದ ಬೇಸತ್ತ ಜನರ ನಡುವೆ, ಪ್ರೀತಿ, ಪ್ರೇಮ, ಬಾಂಧವ್ಯ ಹುಟ್ಟಿಸುವಲ್ಲಿ ಅವರು ಯಶ ಕಂಡಿದ್ದಾರೆ.
ಕೇಂಬ್ರಿಡ್ಜ್ ವಿವಿಯವರು ಅವರನ್ನು ಗೌರವದಿಂದ ಸ್ವಾಗತಿಸಿ, ಜಗತ್ತಿನ ವಿದ್ಯಾರ್ಥಿಗಳ ಮುಂದೆ ತಮ್ಮ ಅನುಭವ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದು ನಮ್ಮ ದೇಶಕ್ಕೆ ಹೆಮ್ಮೆ ತರುವ ವಿಷಯ. ಭಾರತದ ಒಬ್ಬ ನಾಯಕನನ್ನು ಜಗತ್ತಿನ ಶ್ರೇಷ್ಠ ವಿವಿ ಒಂದು ಉಪನ್ಯಾಸ ನೀಡಲು ಅವಕಾಶ ಮಾಡಿಕೊಟ್ಟದ್ಧು ಭಾರತೀಯರಾದ ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು.
ದೇಶ ಪ್ರೇಮದ ಕುರಿತು ಮಾತನಾಡುವ ಬಿಜೆಪಿಗರು, ದೇಶದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿರುವ ರಾಹುಲ್ ಗಾಂಧಿ ಅವರ ಕಾರ್ಯವನ್ನು ಮೆಚ್ಚುವ ಬದಲು ದೇಶ ದ್ರೋಹ ಎಸಗುವ ರೀತಿಯಲ್ಲಿ ಟೀಕೆಮಾಡುತ್ತಿದ್ದಾರೆ. ಇವರ ಸಾಲಿಗೆ ನಮ್ಮ ಕನ್ನಡಿಗರಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಸಹ ಸೇರಿಕೊಂಡಿದ್ದು ಬೇಸರ ತರಿಸುತ್ತದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಕಷ್ಟ ನೋಡಿದ್ದ ಕಾರಣಕ್ಕೆ ಇಂದು ದೇಶದ ಪ್ರತಿ ಮಹಿಳೆ ಕಟ್ಟಿಗೆಯಿಂದ ಹೊಲೆ ಹಚ್ಚಲು ಪರದಾಡಬಾರದು ಎಂಬ ಕಾರಣಕ್ಕೆ ಉಜ್ವಲ ಭಾರತ ಯೋಜನೆ ಮೂಲಕ ಎಲ್ಲರಿಗೂ ಸಿಲಿಂಡರ್ ಕೊಟ್ಟಿದ್ದಾರೆ ಎಂದು ಹೇಳಿ, ಜನರಿಗೆ ವಂಚಿಸುವ ರೀತಿ ಮಾತನಾಡಿದ್ದಾರೆ. ಆದರೆ, ಜೋಷಿಯವರು ಉಜ್ವಲ ಯೋಜನೆಯ ಮೂಲಕ ಕೊಟ್ಟ ಸಿಲಿಂಡರ್, ಒಲೆ ಏನಾಗಿವೆ ಎಂಬುದನ್ನು ಒಮ್ಮೆ ನೋಡಿದರೆ ಬಹುಶಃ ಈ ಮಾತನ್ನು ಹೇಳುತ್ತಿರಲಿಲ್ಲ ಅನ್ನಿಸುತ್ತದೆ. ಮೊದಲು ಉಚಿತ ಸಿಲಿಂಡರ್ ಕೊಡುವ ಭರವಸೆ ನೀಡಿ, ಆಮೇಲೆ ವಚನ ಭ್ರಷ್ಟರಾಗಿದ್ದು ಇದೇ ಪ್ರಧಾನಿಗಳು.
ಮೊದಲು ಗ್ರಾಮೀಣ, ನಗರದ ಬಡ ಕುಟುಂಬಗಳಿಗೆ ಎಲ್‌ಪಿಜಿ ಸಿಲಿಂಡರ್ ಕೊಡುವ ಯೋಜನೆ ಜಾರಿಮಾಡಿ, ಇತ್ತ ಅಡುಗೆ ಅನಿಲ ಮೇಲಿದ್ದ ಸಬ್ಸಿಡಿ ಕಿತ್ತುಹಾಕಿದರು. ಇದರಿಂದ ಬರೀ 420 ರೂ.ಗೆ ಬರುತ್ತಿದ್ದ ಸಿಲಿಂಡರ್ ಅನ್ನು ಇದೀಗ 1150 ರೂ. ಮಾಡಿದ್ದಾರೆ. ಇದೀಗ ಜನಸಮಾನ್ಯರು ಸಹ ಗ್ಯಾಸ್ ಖರೀದಿ ಮಾಡದ ಸ್ಥಿತಿ ಬಂದಿದೆ.
ಇದೆಲ್ಲವೂ ಗೊತ್ತಿದ್ದೂ ಸಹ ಪ್ರಹ್ಲಾದ್ ಜೋಷಿ ಅವರು ನಮ್ಮ ಬಿಜೆಪಿ ಸರ್ಕಾರ, ನಮ್ಮ ಪ್ರಧಾನಿಗಳು ದೇಶದ ಮಹಿಳೆಯರಿಗೆ ಭಾರೀ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದು ಬಹಿರಂಗ ಸಭೆಯಲ್ಲಿ ಹೇಳುವುದು ಅಚ್ಚರಿ ತರಿಸುತ್ತದೆ. ಸಾಧ್ಯವಾದರೆ ಜೋಷಿ ಅವರು ಒಮ್ಮೆ ಈಗಿನ ಬಡ ಕುಟುಂಬದ ಗೃಹಿಣಿಯರ ಜೊತೆ ಒಂದಿಷ್ಟು ಮಾತುಕತೆ ನಡೆಸಿದರೆ ಸದ್ಯ ಜೀವನ ನಡೆಸುವುದು ಎಷ್ಟು ಕಷ್ಟ ಎಂಬುದು ತಿಳಯುತ್ತದೆ. ಕನಿಷ್ಟ ಇನ್ನಾದರೂ ದೇಶದ ಬಡ, ಮಧ್ಯಮ ವರ್ಗದ ಜನರ ಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಂಡು ಸಾರ್ವಜನಿಕ ಭಾಷಣ ಮಾಡಲಿ ಎಂದಿದ್ದಾರೆ.
One attachment • Scanned by Gmail