ರಾಹುಲ್, ರೋಹಿತ್ ಬ್ಯಾಟಿಂಗ್ ಅಬ್ಬರ; ಕಿವೀಸ್ ವಿರುದ್ಧ ಭಾರತಕ್ಕೆ ಸರಣಿ ಜಯ

ರಾಂಚಿ, ನ.19- ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಕೆ.ಎಲ್.ರಾಹುಲ್ ಅವರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ನ್ಯೂಜೆಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಗಳಿಸಿದೆ.‌
ಇಂದು ನಡೆದ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕಿವೀಸ್ ವಿರುದ್ಧ ಭಾರತ ಟಿ-20 ಸರಣಿಯನ್ನು 2-0 ಯಿಂದ ಕೈವಶ ಮಾಡಿಕೊಂಡಿದೆ.
154 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಹತ್ತಿದ ಭಾರತ ಮೂರು ವಿಕೆಟ್ ಕಳೆದುಕೊಂಡು 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು.
ರಾಹುಲ್ ಮತ್ತು ಶರ್ಮಾ ಮೊದಲ ವಿಕೆಟ್ ಗೆ 13.2 ಓವರ್ ಗಳಲ್ಲಿ 117 ರನ್ ಸೇರಿಸಿದರು. ಈ ಜೋಡಿ ಟಿ- 20 ಪಂದ್ಯದಲ್ಲಿ ನಾಲ್ಕನೇ ಬಾರಿ ಶತಕದ ಜತೆಯಾಟದದಲ್ಲಿ ಭಾಗಿಯಾದ ಕೀರ್ತಿಗೆ ಪಾತ್ರವಾಯಿತು.
ರಾಹುಲ್ 49 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 65 ರನ್ ಗಳಿಸಿದರು.
ಶರ್ಮಾ 36 ಎಸೆತಗಳಲ್ಲಿ ಐದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ 55 ರನ್ ಬಾರಿಸಿದರು.
ನಂತರ ಆಡಲು ಬಂದ ಸೂರ್ಯಕುಮಾರ್ ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಪಂತ್ 12 ಹಾಗೂ ವೆಂಕಟೇಶ್ ಅಯ್ಯರ್ 12 ರನ್ ಗಳಿಸಿ ಔಟಾಗದೆ ಉಳಿದರು. ಅಂತಿಮವಾಗಿ 17.2 ಓವರ್ ಗಳಲ್ಲಿ 155 ರನ್ ಗಳಿಸಿ ಭಾರತ ಗೆಲುವಿನ ನಗೆ ಬೀರಿತು.
ಕಿವೀಸ್ ಪರ ಟಿಮ್ ಸೌಧಿ ಮೂರು ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.
ಮಾರ್ಟಿನ್ ಗುಪ್ತಿಲ್ ಹಾಗೂ ಡರೀಲ್ ಮಿಚೆಲ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದರು. ಭುವನೇಶ್ವರ್ ಕುಮಾರ್ ಮೊದಲ ಓವರ್ ನಲ್ಲಿ ಕೆ.ಎಲ್ .ರಾಹುಲ್ ಕ್ಯಾಚ್ ಕೈಚೆಲ್ಲಿದರು. ಮೊದಲ ವಿಕೆಟ್ ಗೆ 48 ರನ್ ಸೇರಿಸಿದರು.
ಗುಪ್ತಿಲ್ ಮತ್ತು ಡರೇಲ್ ತಲಾ 31 ರನ್ ಗಳಿಸಿ ಔಟಾದರು.ಗ್ಲೆನ್ ಫಿಲಿಪ್ಸ್ 21 ಎಸೆತಗಳಲ್ಲಿ 34 ರನ್ ಗಳಿಸಿದರೆ, ಮಾರ್ಕ್ ಚಂಪನ್ ಉಪಯುಕ್ತ 21 ರನ್ ಗಳಿಸಿ ಅಕ್ಷರ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಆರಂಭದಲ್ಲೇ ಬೃಹತ್ ಮೊತ್ತ ಕಲೆ ಹಾಕುವ ಸುಳಿವು ನೀಡಿದ್ದ ಕಿವೀಸ್ ಅಂತಿಮವಾಗಿ 153 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಭಾರತದ ಪರ ಹರ್ಷಲ್ ಪಟೇಲ್ 2, ಭುವನೇಶ್ವರ್, ಅಕ್ಷರ್ ಪಟೇಲ್, ಚಹರ್ ಹಾಗೂ ಅಶ್ವಿನ್ ತಲಾ ಒಂದು ವಿಕೆಟ್ ಗಳಿಸಿದರು.
ನಾಯಕನಾಗಿ ರೋಹಿತ್ ಶರ್ಮಾ ಹಾಗೂ ತರಬೇತುದಾರನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿ ರಾಹುಲ್ ದ್ರಾವಿಡ್ ಮೊದಲ ಸರಣಿಯಲ್ಲಿ ಯಶಸ್ಸು ಸಾಧಿಸಿದೆ.