ರಾಹುಲ್ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಪ್ರಿಯಾಂಕಾ


ಭೂಪಾಲ್(ಮಧ್ಯಪ್ರದೇಶ), ನ. ೨೪- ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆದಿರುವ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದಲ್ಲಿ ಸಾಗಿದ್ದು, ಮಧ್ಯಪ್ರದೇಶದಲ್ಲಿ ನಡೆದಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕ ಗಾಂಧಿ ವಾದ್ರಾ ಪಾಲ್ಗೊಂಡರು.
ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶ ಪ್ರವೇಶಿಸಿದ ಎರಡನೇ ದಿನವಾದ ಇಂದು ಬೋರ್ಗಾವ್‌ನಲ್ಲಿ ಯಾತ್ರೆ ಸಾಗಿದ್ದು, ಈ ಯಾತ್ರೆಯಲ್ಲಿ ರಾಹುಲ್‌ಗಾಂಧಿ ಜತೆ ಪ್ರಿಯಾಂಕ ಗಾಂಧಿ, ಪತಿ, ಮಕ್ಕಳ ಜತೆ ಸೇರಿ ಇಂದು ಹೆಜ್ಜೆ ಹಾಕಿದರು.
ಪ್ರಿಯಾಂಕ ಅವರ ಜತೆ ಅವರ ಪತಿ ರಾಬರ್ಟ್ ವಾದ್ರಾ ಹಾಗೂ ಮಕ್ಕಳೊಂದಿಗೆ ಭಾಗಿಯಾಗಿದ್ದು ವಿಶೇಷವಾಗಿತ್ತು.
ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಿಯಾಂಕ ಮೊದಲ ಬಾರಿಗೆ ಭಾಗಿಯಾಗಿ ಪಾದಯಾತ್ರೆ ನಡೆಸಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ, ಹುರುಪು ಹೆಚ್ಚಾಗಲು ಕಾರಣವಾಗಿದೆ.
ಪ್ರಿಯಾಂಕ ಗಾಂಧಿ ಅವರನ್ನು ಹಿಂಬಾಲಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಹಾಗೂ ಪ್ರಿಯಾಂಕ ಹಾಗೂ ರಾಹುಲ್ ಗಾಂಧಿ ಪರ ಜೈಕಾರದ ಘೋಷಣೆಗಳನ್ನು ಕೂಗಿದರು.
ಇಂದಿನ ಭಾರತ್ ಜೋಡೋ ಯಾತ್ರೆಯಲ್ಲಿ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಸಹ ರಾಹುಲ್ ಮತ್ತು ಪ್ರಿಯಾಂಕ ಜತೆ ಹೆಜ್ಜೆ ಹಾಕಿದರು.
ಭಾರತ್ ಜೋಡೋ ಯಾತ್ರೆಯು ಮಧ್ಯಪ್ರದೇಶದಲ್ಲಿ ಇನ್ನೂ ೧೦ ದಿನಗಳ ಕಾಲ ನಡೆಯಲಿದ್ದು, ಡಿಸೆಂಬರ್ ೪ ರಂದು ರಾಜಸ್ಥಾನ ಪ್ರವೇಶಿಸಲಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ರಾಹುಲ್‌ಗಾಂಧಿ ಕನ್ಯಾಕುಮಾರಿಯಿಂದ ಈ ಯಾತ್ರೆ ಆರಂಭಿಸಿದ್ದರು. ಈ ಭಾರತ್ ಜೋಡೋ ಯಾತ್ರೆ ಅಕ್ಟೋಬರ್‌ನಲ್ಲಿ ಕರ್ನಾಟಕದಲ್ಲಿ ಸಾಗಿದ್ದಾಗ ರಾಹುಲ್‌ಗಾಂಧಿ ಅವರ ತಾಯಿ ಹಾಗೂ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿದ್ದ ಸೋನಿಯಾಗಾಂಧಿ ಯಾತ್ರೆಯಲ್ಲಿ ಭಾಗಿಯಾಗಿದ್ದರು ಈಗ ಪ್ರಿಯಾಂಕ ಗಾಂಧಿ ಕುಟುಂಬ ಸಮೇತರಾಗಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.