ರಾಹುಲ್ ಮಿಂಚಿನ ಆಟ, ಆರ್ ಸಿಬಿ ವಿರುದ್ಧ ಪಂಜಾಬ್ ಗೆ 34 ರನ್ ಗೆಲುವು

ಅಹಮದಾಬಾದ್,ಏ. 30- ಕೆ.ಎಲ್ ರಾಹುಲ್ ಅವರ ಅಜೇಯ 91 ರನ್ ಗಳ ಸ್ಪೋಟಕ ಬ್ಯಾಟಿಂಗ್ ನಿಂದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ‌‌ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ವಿರುದ್ದ ಕಿಂಗ್ಸ್ ಪಂಜಾಬ್ 34 ರನ್ ಗಳಿಂದ ಜಯಭೇರಿ ಬಾರಿಸಿತು.
ಬ್ಯಾಟಿಂಗ್ ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದ ಮಯಾಂಕ್ ಅವರನ್ನು ತಂಡದಿಂದ ಕೈಬಿಡಲಾಯಿತು. ಹೀಗಾಗಿ ರಾಹುಲ್ ಮತ್ತು ಪ್ರಭ್ ಸಿಮ್ರಾನ್ ಇನ್ನಿಂಗ್ಸ್ ಆರಂಭಿಸಿದರು‌.‌
ಉತ್ತಮ‌ ಆರಂಭ ಒದಗಿಸಲು ವಿಫಲರಾಗಿ ಪ್ರಭ್ ಸಿಮ್ರಾನ್ 7 ರನ್ ಗಳಿಸಿ ಔಟಾದರು. ನಂತರ ರಾಹುಲ್ ಮತ್ತು ಗೇಲ್ ಎರಡನೇ ವಿಕೆಟ್ ಗೆ 80 ಕಲೆಹಾಕಿದರು.
24 ಎಸೆತಗಳನ್ನು ಎದುರಿಸಿದ ಗೇಲ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 46 ರನ್ ಗಳಿಸಿ ಔಟಾದರು. ತಾಳ್ಮೆಯ ಆಟವಾಡುತ್ತಲೇ ರಾಹುಲ್ 35 ಎಸೆತಗಳಲ್ಲಿ ರಾಹುಲ್ ಆರ್ಧ ಶತಕ ಬಾರಿಸಿದರು., ನಿಕೊಲಸ್ ಪೂರನ್ ಮತ್ತೆ ಶೂನ್ಯಕ್ಕೆ ನಿರ್ಗಮಿಸಿದರು.
ಗೇಲ್ ಪತನದ ಬೆನ್ನಲ್ಲೇ ‌ಪಂಜಾಬ್ ದಿಢೀರ್ ಕುಸಿತ ಕಂಡಿತು. ಒಂದು ಹಂತದಲ್ಲಿ 99 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಪಂಜಾಬ್ 118 ರನ್ ಗಳಿಸುವಷ್ಟರಲ್ಲೇ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ದೀಪಕ್ ಹೂಡಾ 5 ಹಾಗೂ ಶಾರೂಖ್ ಖಾನ್ ಶೂನ್ಯಕ್ಕೆ ನಿರ್ಗಮಿಸಿದರು. ಬಳಿಕ ರಾಹುಲ್ ಮತ್ತು ಹರ್ ಪ್ರೀತ್ ಜತಗೂಡಿ 61 ರನ್ ಸೇರಿಸಿ ತಂಡದ ಮೊತ್ತವನ್ನು ಐದು ವಿಕೆಟ್ ನಷ್ಟಕ್ಕೆ 179 ರನ್ ಗಳ ಸವಾಲಿನ ಮೊತ್ತ ದಾಖಲಿಸಿತು.


ರಾಹುಲ್ 57ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ ಅಜೇಯ 91ರನ್ ಬಾರಿಸಿದರು.
ಹರ್‌ಪ್ರೀತ್ ಕೇವಲ 17 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 25 ರನ್ ಗಳಿಸಿ ಔಟಾಗದೆ ಉಳಿದರು.
180 ರನ್ ಗಳ ಸವಾಲಿನ ಬೆನ್ನಹತ್ತಿದ‌ ಆರ್ ಸಿಬಿ‌, ಪಂಜಾಬ್‌ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭದಲ್ಲೇ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತು.ಕೇವಲ ಏಳು ರನ್ ಗಳಿಸಿ ನಿರ್ಗಮಿಸಿದರು.


ನಾಯಕ ಕೊಹ್ಲಿ 35 ಹಾಗೂ ರಜತ್ 31 ರನ್ ಗಳಿಸಿದ್ದನ್ನು ಬಿಟ್ಟರೆ ಮ್ಯಾಕ್ಸ್ ವೆಕ್ ಎಬಿಡಿ ಸೇರಿದಂತೆ ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು. ಅರ್ಷಲ್ ಪಟೇಲ್ 31 ರನ್ ಗಳಿಸಿ ಔಟಾದರು. ಜಾಮಿಸನ್ 16 ರನ್ ಅಜೇಯರಾಗುಳಿದರು.
ಅಂತಿಮವಾಗಿ ಆರ್ ಸಿಬಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಆರ್ ಸಿಬಿ ಪರ ಹರ್ ಪ್ರೀತ್ ಬ್ರಾರ್ ಮೂರು ಹಾಗೂ ರವಿ ಬಿಷ್ನೋಯ್ ಎರಡು ವಿಕೆಟ್ ಪಡೆದರು.