ರಾಹುಲ್, ಮಲ್ಯ ಟ್ವಿಟರ್ ಖಾತೆಗೆ ಕೈ ಹಾಕಿದ ಶ್ರೀಕಿ

ಬೆಂಗಳೂರು, ನ.೧೨- ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುವುದರಲ್ಲಿ ಕುಖ್ಯಾತಿ ಗಳಿಸಿ ಜೈಲಿನಿಂದ ಬಿಡುಗಡೆಯಾಗಿರುವ ಶ್ರೀಕೃಷ್ಣ , ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮದ್ಯದ ದೊರೆ ವಿಜಯ್ ಮಲ್ಯ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿದ್ದ ಎನ್ನುವ ಆಘಾತಕಾರಿ ಸಂಗತಿ ಹೊರಬಿದ್ದಿದೆ.

ಈ ಕುರಿತು ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಾಗಿದೆ. ಗಲಾಟೆ ಪ್ರಕರಣದಲ್ಲಿ ಬಂಧಿತರಾಗಿದ್ದ ಸಮಯದಲ್ಲಿ ಪೊಲೀಸರು ನಡೆಸಿದ ವಿಚಾರಣೆ ವೇಳೆ ಈ ವಿಷಯ ಬಹಿರಂಗಪಡಿಸಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ, ವಿಜಯ್ ಮಲ್ಯ ಅವರಲ್ಲದೆ ಪ್ರತಿಷ್ಠಿತ ವ್ಯಕ್ತಿಗಳ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡುವ ಜೊತೆಗೆ ಅವರ ಮಾಹಿತಿಯನ್ನು ಕಳವು ಮಾಡಲಾಗಿದ್ದು ಅಲ್ಲದೆ ಈ ರೀತಿ ಹಣ ವಸೂಲಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಲಾಗಿದೆ.

ಸದ್ಯ ರಾಜ್ಯದಲ್ಲಿ ಭಾರಿ ಮಟ್ಟದಲ್ಲಿ ಸದ್ದು ಮಾಡಿರುವ ಬಿಟ್ ಕಾಯಿನ್ ಹಗರಣದಲ್ಲಿ ಶ್ರೀಕೃಷ್ಣ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ ಇದೇ ಕಾರಣಕ್ಕಾಗಿ ಪರಪ್ಪನ ಅಗ್ರಹಾರಕ್ಕೆ ಹೋಗಿದ್ದ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ.

ನನಗೆ ಯಾರು ಜಾಮೀನು ಕೊಟ್ಟಿದ್ದಾರೆ ಗೊತ್ತಿಲ್ಲ ಎಂದು ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ. ಬಿಟ್-ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ ಅಲ್ಲದೆ ಈ ಸಂಬಂಧ ರಾಜ್ಯ ಸರಕಾರ ಜಾರಿ ನಿರ್ದೇಶನಾಲಯದ ತನಿಖೆಗೂ ಈ ಪ್ರಕರಣವನ್ನು ವಹಿಸಿದೆ.