ರಾಹುಲ್ ಮನೆ ಬಾಗಿಲಿಗೆ ಪೊಲೀಸರು

ನವದೆಹಲಿ,ಮಾ.೧೯:ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಆಡಿದ ಮಾತು ರಾಹುಲ್‌ಗಾಂಧಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಈ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ದೆಹಲಿ ಪೊಲೀಸರು ರಾಹುಲ್‌ಗಾಂಧಿ ಅವರ ಮನೆಯ ಕದ ಬಡಿದಿದ್ದಾರೆ. ದೆಹಲಿ ಪೊಲೀಸ್ ಕಮಿಷನರ್ ಸಾಗರ್‌ಪ್ರೀತ್ ಹೂಡಾ ನೇತೃತ್ವದ ಪೊಲೀಸರ ತಂಡ ಇಂದು ಬೆಳಿಗ್ಗೆ ರಾಹುಲ್‌ಗಾಂಧಿ ಅವರ ದೆಹಲಿ ನಿವಾಸಕ್ಕೆ ತೆರಳಿ ಮಾಹಿತಿ ಸಂಗ್ರಹ ಕಾರ್ಯ ನಡೆಸಿದ್ದಾರೆ.
ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ರಾಹುಲ್‌ಗಾಂಧಿ ಶ್ರೀನಗರದಲ್ಲಿ ಭಾಷಣ ಮಾಡುವಾಗ ಕೆಲ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ನಡೆಯುತ್ತಿವೆ ಎಂದು ಬಹಿರಂಗವಾಗಿಯೇ ಹೇಳಿದ್ದರು, ಇದನ್ನೇ ಮುಂದಿಟ್ಟುಕೊಂಡು ಪೊಲೀಸರು ಮಾಹಿತಿ ನೀಡುವಂತೆ ರಾಹುಲ್‌ಗಾಂಧಿ ಅವರ ಮನೆಗೆ ಇಂದು ಬೆಳಿಗ್ಗೆ ಹೋಗಿದ್ದರು.
ರಾಹುಲ್‌ಗಾಂಧಿ ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಲೈಂಗಿಕ ಕಿರುಕುಳ, ಅತ್ಯಾಚಾರಕ್ಕೊಳಗಾದ ಮಹಿಳೆಯರು ಯಾರು? ಇವರ ಬಗ್ಗೆ ವಿವರ ನೀಡಿ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ದೆಹಲಿ ಪೊಲೀಸರು ರಾಹುಲ್ ಅವರ ಬೆನ್ನು ಬಿದ್ದಿದ್ದು, ಈ ಬಗ್ಗೆ ಕಳೆದ ೩-೪ ದಿನಗಳ ಹಿಂದೆ ನೋಟಿಸ್ ಸಹ ಜಾರಿ ಮಾಡಿದ್ದರು. ರಾಹುಲ್‌ಗಾಂಧಿ ನೋಟಿಸ್‌ಗೆ ಉತ್ತರ ನೀಡದ ಕಾರಣ ಈಗ ದೆಹಲಿ ಪೊಲೀಸ್ ಕಮಿಷನರ್ ಸಾಗರ್‌ಪ್ರೀತ್ ಹೂಡಾ ನೇತೃತ್ವದ ತಂಡ ರಾಹುಲ್‌ಗಾಂಧಿ ಅವರ ಮನೆಗೇ ತೆರಳಿ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.
ರಾಹುಲ್‌ಗಾಂಧಿ ಈಗ ಈ ಮಹಿಳೆಯರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಮಾಹಿತಿ ನೀಡುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ. ದೆಹಲಿ ಪೊಲೀಸರು ಈಗ ರಾಹುಲ್‌ಗಾಂಧಿ ಅವರ ನಿವಾಸದಲ್ಲೇ ಮೊಕ್ಕಾಂ ಹೂಡಿ ಅವರಿಂದ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.
ಭಾರತ್ ಜೋಡೊ ಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಕೆಲ ಮಹಿಳೆಯರು ಅಳುತ್ತಿದ್ದರು. ನನ್ನನು ನೋಡಿದ ಈ ಮಹಿಳೆಯರು ಭಾವೋದ್ವೇಗಕ್ಕೆ ಒಳಗಾಗಿ ತಮ್ಮ ಮೇಲೆ ಅತ್ಯಾಚಾರವೆಸಗಲಾಗಿದೆ. ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದೆಲ್ಲ ಹೇಳಿ ತಮ್ಮ ಬಂಧುಗಳು ಮತ್ತು ಪರಿಚಯಸ್ಥರಿಂದಲೇ ಈ ರೀತಿಯ ಕೃತ್ಯಗಳಾಗಿವೆ ಎಂದು ಮಹಿಳೆಯರು ನನ್ನ ಬಳಿ ಅಲವತ್ತುಕೊಂಡರು. ಆಗ ನಾನು ಪೊಲೀಸರಿಗೆ ದೂರು ನೀಡಲಿಲ್ಲ ಏಕೆ ಎಂದು ಈ ಮಹಿಳೆಯರನ್ನು ಪ್ರಶ್ನಿಸಿದ್ದೆ. ಆಗ ಅವರು ದೂರು ನೀಡಿದರೆ ತಮಗೆ ತೊಂದರೆಯಾಗುತ್ತದೆ ಎಂದು ಕಣ್ಣೀರಿಟ್ಟರು. ಇದು ನಮ್ಮ ದೇಶದ ವಾಸ್ತವ ಸ್ಥಿತಿ ಎಂದು ರಾಹುಲ್ ಶ್ರೀನಗರದಲ್ಲಿ ನಡೆದ ಭಾರತ್ ಜೋಡೊಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಹೇಳಿದ್ದರು. ಅವರ ಈ ಹೇಳಿಕೆ ರಾಹುಲ್‌ಗಾಂಧಿ ಅವರು ಪೊಲೀಸರಿಗೆ ಮಾಹಿತಿ ನೀಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ.
ರಾಹುಲ್‌ಗಾಂಧಿ ಅವರು ಈ ಲೈಂಗಿಕ ಕಿರುಕುಳದ ಬಲಿಪಶುಗಳ ಬಗ್ಗೆ ನೀಡಿದ್ದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ರಾಹುಲ್‌ಗಾಂಧಿ ಅವರಿಗೆ ಕಳೆದ ವಾರ ನೋಟಿಸ್ ನೀಡಿ ಈ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಿದ್ದರು.
ದೆಹಲಿ ಪೊಲೀಸರು ಸಾಮೂಹಿಕ ಅತ್ಯಾಚಾರ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲು ಸಿದ್ಧವಿದ್ದೇವೆ. ನಮಗೆ ಈ ಬಗ್ಗೆ ದೂರು ಬಂದಿಲ್ಲ. ನೀವು ಮಾಹಿತಿ ನೀಡಿದರೆ ನಾವು ಕಾನೂನಿನ ಕ್ರಮಕೈಗೊಳ್ಳುವುದಾಗಿ ರಾಹುಲ್‌ಗಾಂಧಿ ಅವರಿಗೆ ನೋಟಿಸ್‌ನಲ್ಲಿ ಹೇಳಿದ್ದರು.
ರಾಹುಲ್‌ಗಾಂಧಿ ನೋಟಿಸ್‌ಗೆ ಉತ್ತರ ನೀಡದೆ ಇದ್ದ ಕಾರಣ ಅವರ ಮನೆಗೆ ಪೊಲೀಸರು ಇಂದು ಭೇಟಿ ನೀಡಿ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.