
ನವದೆಹಲಿ,ಮಾ.೧೯-ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಅವರ ಮನೆ ಬಾಗಿಲಿಗೆ ದೆಹಲಿ ಪೊಲೀಸರು ಬಂದಿರುವುದಕ್ಕೆ ಕಾಂಗ್ರೆಸ್ ಪಕ್ಷ ತೀವ್ರ ಟೀಕೆ ಮಾಡಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ. ಜತೆಗೆ ರಾಹುಲ್‌ಗಾಂಧಿ ಅವರ ಮನೆ ಮುಂದೆ ದೆಹಲಿ ಪೊಲೀಸರ ನಡೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಸಹ ನಡೆಸಿದರು.
ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್‌ನಲ್ಲಿ ಪಕ್ಷದ ವಕ್ತಾರ ಜಯರಾಂ ರಮೇಶ್ ಪ್ರಧಾನಿ ನರೇಂದ್ರಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಭಾರತ್ ಜೋಡೊ ಯಾತ್ರೆ ಮುಗಿದ ೪೫ ದಿನಗಳ ನಂತರ ಪೊಲೀಸರು ರಾಹುಲ್‌ಗಾಂಧಿ ಅವರ ಬಳಿಗೆ ಬಂದಿದ್ದರ ಔಚಿತ್ಯವೇನು? ಎಂದು ಅವರು ಪ್ರಶ್ನಿಸಿದ್ದಾರೆ. ಎಲ್ಲವನ್ನೂ ದೇಶ ಗಮನಿಸುತ್ತಿದೆ ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ರಾಹುಲ್‌ಗಾಂಧಿ ಅವರ ಹೇಳಿಕೆಗೆ ಮಾಹಿತಿ ಸಂಗ್ರಹಿಸಲು ೪೫ ದಿನಗಳ ನಂತರ ಪೊಲೀಸರಿಗೆ ಅರಿವು ಬಂತೇ, ಈ ವಿಳಂಬದ ಹಿಂದೆ ಏನೆಲ್ಲ ಇದೆ, ಯಾವ ಉದ್ದೇಶಕ್ಕೆ ಇವೆಲ್ಲವನ್ನೂ ದೆಹಲಿ ಪೊಲೀಸರು ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ದೆಹಲಿ ಪೊಲೀಸರ ನಡೆ ಅದಾನಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಪ್ರಶ್ನೆಗಳಿಂದ ಪ್ರಧಾನಿ ಮೋದಿ ಅವರು ಎಷ್ಟು ಗಲಿಬಿಲಿಗೊಂಡಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಪೊಲೀಸರ ಈ ಅಗ್ಗದ ಕುಟೀಲ ನಡೆಗಳು ಅದಾನಿ ಕುರಿತ ನಮ್ಮ ಪ್ರಶ್ನೆಗಳ ಬಗ್ಗೆ ಮೋದಿ ಎಷ್ಟು ತಬ್ಬಿಬ್ಬಾಗಿದ್ದಾರೆ, ಗಲಿಬಿಲಿಗೊಂಡಿದ್ದಾರೆ ಎಂಬುದನ್ನು ಸಂಕೇತಿಸುತ್ತದೆ. ಈ ಕಿರುಕುಳದಿಂದ ನಾವು ವಿಚಲಿತರಾಗಲ್ಲ, ಉತ್ತರವನ್ನು ಹುಡುಕುವ ನಮ್ಮ ದೃಢತೆಯನ್ನು ಈ ಎಲ್ಲ ಕುಟೀಲತೆಗಳು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಜಯರಾಂ ರಮೇಶ್ ಹೇಳಿದ್ದಾರೆ.
ಖೇರಾ ವಾಗ್ದಾಳಿ
ರಾಹುಲ್‌ಗಾಂಧಿ ಅವರ ಬಾಯಿ ಮುಚ್ಚಿಸಲು ಕೇಂದ್ರ ಸರ್ಕಾರ ಅವರ ಮನೆಗೆ ಪೊಲೀಸರನ್ನು ಕಳುಹಿಸಿದೆ. ಇದಕ್ಕೆಲ್ಲ ನಾವು ಜಗ್ಗುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪವನ್‌ಖೇರಾ ಹೇಳಿದ್ದಾರೆ.
ಕಾರ್ಯಕರ್ತರ ಪ್ರತಿಭಟನೆ
ರಾಹುಲ್‌ಗಾಂಧಿ ಅವರ ಮನೆಗೆ ದೆಹಲಿ ಪೊಲೀಸರು ಬಂದಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮನೆಯ ಹೊರಗೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.