ರಾಹುಲ್ ಪ್ರಧಾನಿ ಅಭ್ಯರ್ಥಿ

ನವದೆಹಲಿ,ಆ.೨೭:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಧಾನಮಂತ್ರಿ ಹುದ್ದೆಯ ಬಗ್ಗೆ ಆಸಕ್ತಿ ಹೊಂದಿಲ್ಲ ಪ್ರಧಾನಮಂತ್ರಿ ಹುದ್ದೆಯನ್ನು ಕಾಂಗ್ರೆಸ್ ಬಯಸಲ್ಲ ಎಂದು ಹೇಳಿದ್ದ ಕಾಂಗ್ರೆಸ್, ಇದೀಗ ತನ್ನ ರಾಗವನ್ನು ಬದಲಿಸಿದ್ದು, ಪಕ್ಷದ ಯುವನಾಯಕ ರಾಹುಲ್‌ಗಾಂಧಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿದೆ. ರಾಹುಲ್‌ಗಾಂಧಿ ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ರಾಜಸ್ತಾನ ಮುಖ್ಯಮಂತ್ರಿ ಅಶೋಕ್‌ಗೆಲ್ಹೋಟ್ ನೀಡಿರುವ ಹೇಳಿಕೆ ರಾಜಕೀಯವಾಗಿ ಸಂಚಲನ ಸೃಷ್ಟಿಸಿದೆ. ಇಂಡಿಯಾ ಮೈತ್ರಿಕೂಟದ ಎಲ್ಲ ೨೬ ಪಕ್ಷಗಳ ಜತೆ ಸುರ್ದೀಘ ಸಮಾಲೋಚನೆ ನಡೆಸಿದ ನಂತರವೇ ಕಾಂಗ್ರೆಸ್‌ನ ರಾಹುಲ್ ಅವರನ್ನು ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಶೋಕ್‌ಗೆಲ್ಹೋಟ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಪ್ರಧಾನಮಂತ್ರಿ ಹುದ್ದೆಯನ್ನು ಬಯಸಿರುವುದನ್ನು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಒಪ್ಪುತ್ತವೆಯೇ ಇಲ್ಲವೇ ಎಂಬುದು ಈಗ ಕುತೂಹಲಕ್ಕೆ ಎಡೆ ಮಾಡಿದೆ. ಕಾಂಗ್ರೆಸ್‌ನ ಅಶೋಕ್‌ಗೆಲ್ಹೋಟ್ ಅವರ ಹೇಳಿಕೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೆ ನೀಡಿ ಕಾಂಗ್ರೆಸ್ ಪ್ರಧಾನಮಂತ್ರಿ ಹುದ್ದೆ ಅಕಾಂಕ್ಷಿಯಲ್ಲ, ದೇಶದ ಏಕತೆಗೆ ಪಕ್ಷ ಯಾವುದೇ ತ್ಯಾಗಕ್ಕೂ ಸಿದ್ಧವಾಗಿದೆ ಎಂದು ಹೇಳಿಕೆ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಆದರೆ ಈಗ ಕಾಂಗ್ರೆಸ್‌ನ ಹಿರಿಯ ನಾಯಕ ಅಶೋಕ್ ಗೆಲ್ಹೋಟ್ ನೀಡಿರುವ ಹೇಳಿಕೆ ತೀವ್ರ ಮಹತ್ವ ಪಡೆದುಕೊಂಡಿದೆ. ೨೦೨೪ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ಮೂಗುದಾರ ಹಾಕಲು ಇಂಡಿಯಾ ಮೈತ್ರಿಕೂಟ ತೀವ್ರ ಕಸರತ್ತು ನಡೆಸಿದೆ. ಈಗಾಗಲೇ ಬಿಹಾರ ಮತ್ತು ಬೆಂಗಳೂರಿನಲ್ಲಿ ಎರಡು ಸಭೆಗಳನ್ನು ನಡೆಸಿ ಕಾರ್ಯತಂತ್ರ ರೂಪಿಸಿದ್ದು, ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ೩ನೇ ಸಭೆ ನಡೆಸಲು ವೇದಿಕೆ ಸಿದ್ಧಪಡಿಸಿದೆ. ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ಅವರು,ರಾಹುಲ್‌ಗಾಂಧಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಹೇಳಿದರು. ದೇಶದ ಇಂದಿನ ಪರಿಸ್ಥಿತಿ ಎಲ್ಲ ವಿರೋಧ ಪಕ್ಷಗಳ ಮೇಲೆ ಅಪಾರ ಒತ್ತಡವನ್ನು ಸೃಷ್ಠಿಸಿದೆ. ಜತೆಗೆ ಸಾರ್ವಜನಿಕವಾಗಿಯೂ ಹೆಚ್ಚಿನ ಒತ್ತಡಗಳು ಮೈತ್ರಿಕೂಟ ಸ್ಥಾಪನೆಗೆ ಕಾರಣವಾಗಿದೆ ಎಂದ ಅವರು ದೇಶದ ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಯೇತರ ವಿರೋಧ ಪಕ್ಷಗಳ ಮೈತ್ರಿಕೂಟದ ಅಗತ್ಯತೆಯನ್ನು ಗೆಲ್ಹೋಟ್ ಪ್ರತಿಪಾದಿಸಿದ್ದಾರೆ. ದೇಶದಲ್ಲಿ ಕಳೆದ ೧೦ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಶೇ. ೩೧ರಷ್ಟು ಮತಗಳಷ್ಟೇ ಬಿದ್ದಿದೆ. ಉಳಿದ ಶೇ. ೬೯ರಷ್ಟು ಮತಗಳು ಬಿಜೆಪಿ ವಿರುದ್ಧ ಚಲಾವಣೆಯಾಗಿದೆ. ಇದನ್ನು ದುರಂಹಕಾರದ ವರ್ತನೆ ತೋರುತ್ತಿರುವ ಪ್ರಧಾನಿ ಅವರು ಅರಿತುಕೊಳ್ಳಬೇಕು ಎಂದು ಗೆಲ್ಹೋಟ್ ಸಂದರ್ಶನದಲ್ಲಿ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಶೇ. ೫೦ರಷ್ಟು ಮತಗಳಿಸಿ ೩ನೇ ಬಾರಿ ಅಧಿಕಾರ ಹಿಡಿಯುವ ಮೋದಿ ಅವರ ಕನಸು ನನಸಾಗಲ್ಲ, ೨೦೧೮ರಲ್ಲಿ ಮೋದಿ ಅವರ ಜನಪ್ರಿಯತೆ ಉತ್ತುಂಗದಲ್ಲಿದ್ದಾಗಲೇ ಬಿಜೆಪಿ ಶೇ, ೫೦ರಷ್ಟು ಮತ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶೇಕಡವಾರು ಮತಗಳಿಕೆ ಕಡಿಮೆಯಾಗಲಿದೆ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ಗೆಲ್ಹೋಟ್ ಭವಿಷ್ಯ ನುಡಿದಿದ್ದಾರೆ. ಈ ಹಿಂದಿನ ಯುಪಿಎ ಸರ್ಕಾರದ ವೈಫಲ್ಯದಿಂದ ಮೋದಿ ೨೦೧೪ರಲ್ಲಿ ಪ್ರಧಾನಿ ಪಟ್ಟಕ್ಕೇರಲು ಸಾಧ್ಯವಾಯಿತೇ ಎಂಬ ಪ್ರಶ್ನೆ ಗೆಲ್ಹೋಟ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ಆಡಳಿತ ವಿರೋಧ ಅಲೆ ಬಿಜೆಪಿ ಗೆಲುವಿಗೆ ನೆರವಾಗಿರಬಹುದು ಆದರೆ, ಮೋದಿ ಅವರ ವರ್ತನೆ ಮಾತಿನ ಶೈಲಿಯನ್ನು ಯಾರು ಒಪ್ಪಲು ಸಾಧ್ಯವಿಲ್ಲ, ಮುಂದಿನ ಚುನಾವಣೆ ಫಲಿತಾಂಶ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದರು. ಚಂದ್ರಯಾನ-೩ರ ಯಶಸ್ಸಿನ ಬಗ್ಗೆ ಮಾತನಾಡಿದ ಅವರು, ಈ ಕೊಡುಗೆ ಮಾಜಿ ಪ್ರಧಾನಿಗಳಾದ ಜವಹರಲಾಲ್ ನೆಹರು ಮತ್ತು ಇಂದಿರಾಗಾಂಧಿಯವರಿಗೆ ಸಲ್ಲಬೇಕು. ಚಂದ್ರಯಾನ-೩ ಯಶಸ್ಸಿಗೆ ನೆಹರು ಅವರ ಕೊಡುಗೆಯೂ ಪ್ರಮುಖವಾಗಿದೆ. ಅಲ್ಲದೆ ಈ ಅಭೂತಪೂರ್ವ ಸಾಧನೆಗೆ ಇಂದಿರಾಗಾಂಧಿ ಅವರ ಕಠಿಣ ಶ್ರಮವೂ ಕಾರಣವಾಗಿದೆ ಎಂದು ಹೇಳಿದರು. ವಿಜ್ಞಾನಿ ವಿಕ್ರಂ ಸಾರಾಭಾಯಿ ಅವರ ಸಲಹೆಯನ್ನು ನೆಹರು ಕೇಳಿದ್ದರಿಂದಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅಂದು ಈ ಸಂಸ್ಥೆಯ ಹೆಸರು ಬೇರೆ ಇತ್ತು, ಇಂದಿರಾಗಾಂಧಿ ಅವರು ಅಧಿಕಾರಕ್ಕೆ ಬಂದ ನಂತರ ಇಸ್ರೊ ಎಂದು ಬದಲಾಯಿಸಲಾಯಿತು ಎಂದು ಗೆಲ್ಹೋಟ್ ಹೇಳಿದರು.