ರಾಹುಲ್ ಪ್ರಕರಣ: ತೀರ್ಪು ಕಾಯ್ದಿರಿಸಿದ ಗುಜರಾತ್ ಕೋರ್ಟ್

ಅಹಮದಾಬಾದ್, ಮೇ.2- ಮೋದಿ‌ ಉಪನಾಮ ಕುರಿತು ವಿವಾದಾಸ್ಪದ ಹೇಳಿಕೆ ನೀಡಿ ಎರಡು ವರ್ಷ ಜೈಲು ಶಿಕ್ಷೆ ಗೆ ಗುರಿಯಾಗಿರುವ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಗುಜರಾತ್ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಪ್ರಕರಣ ಕುರಿತಂತೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದೆ. ಇದರಿಂದಾಗಿ ರಾಹುಲ್ ಅವರಿಗೆ ಕಾನೂನು ಸಮರದಲ್ಲಿ ಹಿನ್ನಡೆಯುಂಟಾಗಿದೆ.
ಮೇ 8ರಿಂದ ಜೂನ್ 3ರವರೆಗೆ ಹೈಕೋರ್ಟಿಗೆ ರಜೆಯಿದೆ. ಹೀಗಾಗಿ ಬೇಸಿಗೆ ರಜೆ ಬಳಿಕ ತೀರ್ಪು ಪ್ರಕಟವಾಗಲಿದೆ.
2019 ಏ.13ರಂದು ಕೋಲಾರದಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತನಾಡಿದ ವೇಳೆ, ಕಳ್ಳರಿಗೆಲ್ಲ ಮೋದಿ ಉಪನಾಮ ಏಕಿದೆ ಎಂದು ವಿವಾದಾಸ್ಪದ ಹೇಳಿಕೆ ನೀಡಿದ್ದರು.
ಈ ಬಗ್ಗೆ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮಾರ್ಚ್ 23ರಂದು ಸೂರತ್ ನ್ಯಾಯಾಲಯ ವಿಚಾರಣೆ ರಾಹುಲ್ ಅಪರಾಧಿ ಎಂದು ತೀರ್ಪು ನೀಡಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಈ ಆದೇಶ ಪ್ರಶ್ನಿಸಿ ಏಪ್ರಿಲ್ 3ರಂದು ರಾಹುಲ್​ ಗಾಂಧಿ ಸೂರತ್ ಸೆಷನ್​ ನ್ಯಾಯಾಲಯದಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಒಂದು ಅರ್ಜಿ ಜಾಮೀನಿಗಾಗಿ ಮತ್ತು ಇನ್ನೊಂದು ಅರ್ಜಿಯಲ್ಲಿ ತಮ್ಮ ಮೇಲೆ ಬಾಕಿ ಉಳಿದಿರುವ ಅಪರಾಧದ ತಡೆ ಕೋರಿದ್ದರು. ಸೆಷನ್​ ನ್ಯಾಯಾಲಯವು ರಾಹುಲ್​ ಗಾಂಧಿಗೆ ಜಾಮೀನು ಮಂಜೂರು ಮಾಡಿದರೂ, ಶಿಕ್ಷೆಗೆ ತಡೆಯಾಜ್ಞೆ ನೀಡುವ ಮನವಿಯನ್ನು ತಿರಸ್ಕರಿಸಿತ್ತು.
ಕಳೆದವಾರ ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಗೀತಾ ಗೋಪಿ ಅವರ ಮುಂದೆ ಈ ಪ್ರಕರಣವನ್ನು ತುರ್ತು ವಿಚಾರಣೆಗಾಗಿ ಅರ್ಜಿ ಬಂದಿತ್ತು. ಆದರೆ, ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು. ನಂತರ ಈ ಪ್ರಕರಣವನ್ನು ನ್ಯಾಯಮೂರ್ತಿ ಹೇಮಂತ್ ಪ್ರಚ್ಛಕ್ ಅವರಿಗೆ ವಹಿಸಲಾಗಿತ್ತು.
ಏಪ್ರಿಲ್​ 29ರಂದು ನ್ಯಾಯಮೂರ್ತಿ ಹೇಮಂತ್ ಪ್ರಚ್ಛಕ್ ಅರ್ಜಿ ವಿಚಾರಣೆ ನಡೆಸಿ, ಇಂದಿಗೆ ಮುಂದೂಡಿಕೆ ಮಾಡಿದ್ದರು. ರಾಹುಲ್​ ಗಾಂಧಿ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ವಿಷಯದಲ್ಲಿ ಎರಡೂ ಕಡೆಯ ವಾದಗಳು ಮುಕ್ತಾಯವಾಗಿದ್ದು, ಮಧ್ಯಂತರ ಅಥವಾ ಅಂತಿಮ ಆದೇಶ ತುರ್ತಾಗಿ ನೀಡಬೇಕೆಂದು ನ್ಯಾಯ ಪೀಠಕ್ಕೆ ಮನವಿ ಮಾಡಿದರು.
ಆದರೆ ಈ ಹಂತದಲ್ಲಿ ಯಾವುದೇ ಮಧ್ಯಂತರ ರಕ್ಷಣೆ ನೀಡಲಾಗುವುದಿಲ್ಲ ಎಂದು ನ್ಯಾ. ಹೇಮಂತ್ ಪ್ರಚ್ಚಕ್ ಹೇಳಿದರು.