
ವಿಜಯಪುರ:ಮಾ.30: ಯುವ ನಾಯಕ ರಾಹುಲ್ ಗಾಂಧೀಜಿ ಅವರ ನಾಯಕತ್ವ ದಮನಗೊಳಿಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡ ಅಬ್ದುಲ್‍ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಆರಂಭಗೊಂಡ ರ್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದಮನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೂರಿ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಸ್ವಾತಂತ್ರ್ಯ ಹೋರಾಟಕ್ಕೆ ಅನುಪಮ ಕೊಡುಗೆ ನೀಡಿದ ಗಾಂಧಿ ಪರಿವಾರದ ಕುಡಿ ರಾಹುಲ್ ಗಾಂಧಿ ಅವರ ನಾಯಕತ್ವವನ್ನು ದಮನಗೊಳಿಸುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.
ಮಾನನಷ್ಟ ಪ್ರಕರಣ ಸಂಬಂಧ ಸೂರತ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಲೋಕಸಭೆ ಸಚಿವಾಲಯದ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ, ಈ ರೀತಿಯಾಗಿ ತರಾತುರಿಯ ಆದೇಶ ಹೊರಡಿಸಿದ ಔಚಿತ್ಯವೇನು? ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಹೋಗುವ ಅವಕಾಶ ಎಲ್ಲವೂ ಇದೆ, ಆದರೆ ಏಕಾಏಕಿಯಾಗಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸುವುದು ಪ್ರಜಾಪ್ರಭುತ್ವ ವಿರೋಧಿ, ಅವರ ಹಕ್ಕಿನ ಉಲ್ಲಂಘನೆ ಸಹ ಹೌದು.
ಇಲ್ಲಿ ಬಿಜೆಪಿ ಶಾಸಕರ ಮನೆಯಲ್ಲಿ ಕೋಟಿ ಕೋಟಿ ಹಣ ದೊರಕಿದೆ,ಅವರಿಗೆ ಯಾವ ಶಿಕ್ಷೆಯೂ ಇಲ್ಲ, ಆದರೆ ರಾಹುಲ್ ಗಾಂಧಿ ಅವರಿಗೆ ಅಮಾನತ್ತು ಶಿಕ್ಷೆ? ಇದು ನ್ಯಾಯವೇ?
ಕೇಂದ್ರ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವೈಫಲ್ಯವಾಗಿದೆ. ಬೆಲೆ ಏರಿಕೆ ವ್ಯಾಪಕವಾಗಿದೆ, ಹೀಗಾಗಿ ಜನರ ಗಮನ ಬೆರೆಡೆ ಸೆಳೆದು ಕೋಮುದ್ವೇಷ ಬಿತ್ತನೆ, ಕಾಂಗ್ರೆಸ್ ನಾಯಕರ ದಮನ ಒಂದೇ ಬಿಜೆಪಿ ಅಜೆಂಡಾ ಆಗಿ ಪರಿಗಣಿಸಿದೆ. ಇದು ಜನರಲ್ಲಿ ಪ್ರಜಾಪ್ರಭುತ್ವ ನಂಬಿಕೆ ಕಡಿಮೆಯಾಗುವಂತೆ ಮಾಡುತ್ತಿದೆ. ಆದರೆ ಈ ಎಲ್ಲ ಬೆದರಿಕೆಗಳಿಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬೆದರುವುದಿಲ್ಲ, ದೇಶದ ಹಿತಕ್ಕಾಗಿ ಪ್ರಾಣವನ್ನು ಕೊಟ್ಟ ಪರಿವಾರದ ರಾಹುಲ್ ಗಾಂಧೀ ಅವರ ಮೇಲೆ ಗದಾಪ್ರಹಾರ ಮಾಡುವುದನ್ನು ಕೇಂದ್ರ ಸರ್ಕಾರ ಬಿಡಬೇಕು, ಕುಟೀಲ ರಾಜನೀತಿಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಶಬ್ಬೀರ ಜಹಾಗೀರದಾರ, ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಜಮೀರ ಬಕ್ಷಿ, ಸಾಹೇಬಗೌಡ ಬಿರಾದಾರ, ವಿದ್ಯಾರಾಣಿ ತುಂಗಳ, ಜಿ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳೀಮನಿ, ಹಮೀದಾ ಪಟೇಲ, ಭಾರತಿ ಹೊಸಮನಿ, ಆರತಿ ಶಹಾಪೂರ ಸೇರಿದಂತೆ ಹಲರು ಕಾರ್ಯಕರ್ತರು ಪಾಲ್ಗೊಂಡಿದ್ದರು.