ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ: ಕೇರಳ ಮೂಲಕ ರಾಜ್ಯ ಪ್ರವೇಶ : ಡಿ.ಕೆ ಶಿವಕುಮಾರ್

ಬೆಂಗಳೂರು,ಜು.15- ಸ್ವಾತಂತ್ರ್ಯೋತ್ಸವ ಅಮೃತಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷ, ‘ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ಕೇರಳದಿಂದ ಚಾಮರಾಜನಗರ ಮಾರ್ಗವಾಗಿ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಕೆಪಿಸಿ ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಆ.1 ರಿಂದ ಆ.10 ರವರೆಗೂ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲಾಗುವುದು. ನಂತರ ಆ.15 ರಂದು 1 ಲಕ್ಷ್ಕ್ಕೂ ಹೆಚ್ಚು ಜನ ಪಕ್ಷಾತೀತವಾಗಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ಹಿಡಿದು ಹೆಜ್ಜೆ ಹಾಕಲಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ಕೊಟ್ಟದ್ದು, ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರ ಮಾಡಿದ್ದು ಕಾಂಗ್ರೆಸ್’ ಎಂದು ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಸುಮಾರು 350 ಕ್ಕೂ ಹೆಚ್ಚು ಕಿ.ಮೀ ಉದ್ದದ ಪಾದಯಾತ್ರೆ ರಾಜ್ಯದಲ್ಲಿ ನಡೆಯಲಿದೆ ಎಂದು ಹೇಳಿದರು.

ನಾಳೆ ಸಂಜೆ ಸುರ್ಜೆವಾಲ ಅವರು ಪಕ್ಷದ ಪದಾಧಿಕಾರಿಗಳು, ಶಾಸಕರು, ಪರಾಜಿತ ಅಭ್ಯರ್ಥಿಗಳ ಜತೆ ಜೂಮ್ ನಲ್ಲಿ ಸಭೆ ನಡೆಸಲಿದ್ದಾರೆ .ನಾಳಿನ ಸಭೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ನೀಡಿರುವ ವಿಚಾರವಾಗಿಯೂ ಚರ್ಚೆ ಮಾಡುತ್ತೇವೆ ಎಂದರು.

ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಸಮಾವೇಶದಲ್ಲಿ ‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನುಡಿದಂತೆ ನಡೆದು ಆಡಳಿತ ನಡೆಸಿರುವ ಬಗ್ಗೆ ಹಾಗೂ ಅಧಿಕಾರ ಇದ್ದಾಗ ಎಲ್ಲ ಇಲಾಖೆಗಳಲ್ಲಿನ ಸಾಧನೆ ತಿಳಿಸಲಾಗುವುದು. ಹಾಲು, ಅಕ್ಕಿ, ರಸ್ತೆ, ರೈತ ಹಾಗೂ ಕೃಷಿ ವಿಚಾರಗಳ ಬಗ್ಗೆ ಜನರಿಗೆ ಮುಟ್ಟಿಸುವ ಕಾರ್ಯಕ್ರಮ ಇದಾಗಿದೆ’ ಎಂದು ತಿಳಿಸಿದರು.

ಈ ಕಾರ್ಯಕ್ರಮ ಕಾಂಗ್ರೆಸ್ ಗೆ ನಷ್ಟವಾಗುತ್ತದೆಯೇ, ಬಿಜೆಪಿ ಇದಕ್ಕೆ ಟೀಕೆ ಮಾಡುತ್ತಿರುವುದೇಕೆ ಎಂದು ಕೇಳಿದ ಪ್ರಶ್ನೆಗೆ, ‘ಅಸೂಯೆಗೆ ಮದ್ದಿಲ್ಲ. ನಮ್ಮ ಸರ್ಕಾರದ ಕಾರ್ಯಕ್ರಮಗಳಿಗೆ ಸರಿಸಮನಾಗಿ ಯೋಜನೆ ನೀಡಲು ಬಿಜೆಪಿಯವರಿಂದ ಸಾಧ್ಯವಾಗುತ್ತಿಲ್ಲ. ಬಿಜೆಪಿಯವರ ಕಳೆದ ಪ್ರಣಾಳಿಕೆ ತೆಗೆದು ನೋಡಿ. ಕಳೆದ ಮೂರು ವರ್ಷದಲ್ಲಿ ಅವರು ಎಷ್ಟು ಭರವಸೆ ಈಡೇರಿಸಿದ್ದಾರೆ ಪರಿಶೀಲಿಸಿ. ನಮ್ಮ ಸರ್ಕಾರ ಇದ್ದಾಗ ಕೊಟ್ಟ ಮಾತಿನಲ್ಲಿ ಶೇ.95ರಷ್ಟು ಭರವಸೆ ಈಡೇರಿಸಿದ್ದೇವೆ. ಅದಕ್ಕೆ ಅವರಿಗೆ ಹೊಟ್ಟೆಕಿಚ್ಚು. ಇದಕ್ಕೆ ಪರಿಹಾರ ಎಂದರೆ ಜನ ರಾಷ್ಟ್ರಧ್ವಜ ಹಿಡಿದು ಈ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ತಿಳಿಸಿದರು.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದ್ದು, ಈ ಆಕ್ರೋಶ ಹೆಚ್ಚಾಗುವ ಮುನ್ನ ಚುನಾವಣೆ ಮಾಡಬೇಕು ಎಂದು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಸುದ್ದಿ ಇದೆ. ಪಕ್ಷದ ಸಂಘಟನೆ ಮಾಡುತ್ತಿದ್ದಾರೋ ಅಥವಾ ಸುದ್ದಿ ಹರಡಿಸುತ್ತಿದ್ದಾರೋ ಗೊತ್ತಿಲ್ಲ. ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ಅದನ್ನು ಎದುರಿಸಲು ಕಾಂಗ್ರೆಸ್ ಸಿದ್ಧವಿದೆ’ ಎಂದರು