ರಾಹುಲ್ ಗಾಂಧಿ ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು: ಡಿ.22:- ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಪಮಾನಿಸಿದ ರಾಹುಲ್ ಗಾಂಧಿ, ಟಿಎಂಸಿ ಸಂಸದರ ವಿರುದ್ಧ ಬಿಜೆಪಿ ನಗರ, ಗ್ರಾಮಾಂತರ ಸಮಿತಿ ವತಿಯಿಂದ ನೂರಾರು ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಟಿ.ಎಸ್.ಶ್ರೀವತ್ಸ, ಇತ್ತೀಚೆಗೆ ಸಂಸತ್ತಿನ ಹೊರ ಭಾಗದ ಮೆಟ್ಟಿಲುಗಳ ಮೇಲೆ ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅವಮಾನಿಸಲಾಗಿದೆ. ಇದು ಹಿಂದುಳಿದ ವರ್ಗಕ್ಕೆ ಮಾಡಿದ ಅವಮಾನ. ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಉಪ ರಾಷ್ಟ್ರಪತಿಯವರನ್ನು ಅಣಕಿಸುವ ವೀಡಿಯೋ ಪ್ರದರ್ಶಿಸಿದ್ದಾರೆ. ಇದು ಅಕ್ಷಮ್ಯ ಅಪರಾಧ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಮುಖಂಡರಿಗೆ ಸಂವಿಧಾನದ ಬಗ್ಗೆ ನಂಬಿಕೆ, ಗೌರವವಿಲ್ಲ. ಅವರ ವರ್ತನೆಗೆ ರಾಷ್ಟ್ರಪತಿಯವರೂ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕದ ಒಬ್ಬ ಮಂತ್ರಿ ತೆಲಂಗಾಣಕ್ಕೆ ಹೋಗಿ ಸ್ಪೀಕರ್ ಹುದ್ದೆಗೆ ಅವಮಾನ ವಾಡಿದರು. ಹೀಗಿದ್ದರೂ ಸರ್ಕಾರ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಹೀಗೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತಿದ್ದಾರೆ ಎಂದು ದೂರಿದರು.
ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಸಂವಿಧಾನಿಕ ಹುದ್ದೆಯಾದ ಉಪಾರಾಷ್ಟ್ರಪತಿಗಳನ್ನು ಅಣುಕಿಸಿ ಅಪಮಾನ ಮಾಡಿರುವುದು ಖಂಡನೀಯ. ಕಾಂಗ್ರೆಸ್ ನಾಯಕರು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅವಮಾನಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಕುಟುಂಬದ ಗೌರವ ಹಾಳು ಮಾಡುತ್ತಿರುವುದಲ್ಲದೆ ಸಂವಿಧಾನದ ಘನತೆಯನ್ನೂ ಕಳೆಯುತ್ತಿದ್ದಾರೆ. ಜನರೆ ನಿಮಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಮೊದಲು ಉಪ ರಾಷ್ಟ್ರಪತಿ, ಸಂವಿಧಾನಕ್ಕೆ ಗೌರವ ಕೊಡುವುದನ್ನು ಕಲಿಯಲಿ ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಮಾಜಿ ಮೇಯರ್‍ಗಳಾದ ಸಂದೇಶ್ ಸ್ವಾಮಿ, ಸುನಂದಾ ಪಾಲನೇತ್ರ, ಮಾಜಿ ಉಪ ಮೇಯರ್ ರೂಪ, ಮುಡಾ ಮಾಜಿ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ರಘು ಕೌಟಿಲ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಷ ಹೇಮಂತ್ ಕುಮಾರ್‍ಗೌಡ, ಮಿರ್ಲೆ ಶ್ರೀನಿವಾಸಗೌಡ, ವಾಣಿಸ್ ಕುಮಾರ್, ಗಿರಿಧರ್, ನಗರಪಾಲಿಕೆ ಮಾಜಿ ಸದಸ್ಯ ಬಿ.ವಿ.ಮಂಜುನಾಥ್, ಎಂ.ಎಸ್.ಧನಂಜಯ, ಗೋಪಾಲ್‍ರಾವ್, ನಗರ ಮಹಿಳಾ ಘಟಕದ ಅಧ್ಯಕ್ಷೆ ಹೇಮ ನಂದೀಶ್, ಯುವ ಮೋರ್ಚಾ ಅದ್ಯಕ್ಷ ಕಿರಣ್ ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.