ರಾಹುಲ್ ಗಾಂಧಿ ಅನರ್ಹ: ಬಿಜೆಪಿ ವಿರುದ್ಧ ಕೈ ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು: ಜು.13:- ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಸೇಡಿನ ರಾಜಕೀಯವನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.
ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರಿಗೆ ಸೂರತ್ ನ್ಯಾಯಾಲಯ ನೀಡಿದ ಆದೇಶ ಮುಂದಿಟ್ಟುಕೊಂಡು ಕೇಂದ್ರದ ಬಿಜೆಪಿ ನಾಯಕರು ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಅಸಂವಿಧಾನಿಕವಾಗಿದೆ. ಮೋದಿ ಸರ್ಕಾರದ ತೀರ್ಮಾನ ದೋಷಗಳಿಂದ ಕೂಡಿದ್ದು, ಅನರ್ಹ ತೀರ್ಮಾನ ಕಾನೂನುಬದ್ಧವಾಗಿ ಸಮರ್ಥನೀಯವಲ್ಲ. ಸೂರತ್ ನ್ಯಾಯಾಲಯ ಈ ಪ್ರಕರಣಕ್ಕೆ ನೀಡಿರುವ ಶಿಕ್ಷೆಯ ಪ್ರಮಾಣ ಗರಿಷ್ಠ ಮಟ್ಟದ್ದಾಗಿದ್ದು, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಹಿಂದಿನ ಯಾವುದೇ ಪ್ರಕರಣಗಳಲ್ಲಿ ಇಷ್ಟು ದೊಡ್ಡ ಮಟ್ಟದ ಶಿಕ್ಷೆ ವಿಧಿಸಿರಲಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಕಾಂಗ್ರೆಸ್‍ಗೆ ನ್ಯಾಯಾಂಗದ ಮೇಲೆ ನಂಬಿಕೆಯಿದ್ದು, ಸೂರತ್ ನ್ಯಾಯಾಲಯದ ತೀರ್ಪಿನ ವಿರುದ್ಧ ಗುಜರಾತ್ ಹೈ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಅಲ್ಲಿಯೂ ನಮಗೆ ಸೋಲಾಗಿದೆ.
2013ರ ತೀರ್ಪಿನಲ್ಲಿ ಯಾವುದೇ ಸಂಸದ ಅಥವಾ ಶಾಸಕರು ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಶಿಕ್ಷೆ ಘೋಷಿಸಿದರೆ ಅಪರಾಧ ಸಾಬೀತಾದ ಸಮಯದಿಂದ ಅನರ್ಹರಾಗುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ಬಿಜೆಪಿ ಸರ್ಕಾರ ತೀರ್ಪು ಬಂದ ಎರಡು ದಿನಗಳಲ್ಲೇ ರಾಹುಲ್ ಗಾಂಧಿ ಅವರ ಸಂಸದೀಯ ಸ್ಥಾನ ಅನರ್ಹಗೊಳಿಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು
ಸತ್ಯ ಮಾತನಾಡುವ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸುವ ಮೂಲಕ ಲೋಕಸಭೆಯಿಂದ ತೆಗೆದುಹಾಕುವ ಹುನ್ನಾರವಾಗಿದೆ. ಬಿಜೆಪಿಯವರು ಪ್ರಶ್ನೆ ಮಾಡುವವರನ್ನು ಲೋಕಸಭೆಯಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ. ಸತ್ಯ ಮಾತನಾಡುವ ಮತ್ತು ಬಿಜೆಪಿಯ ಸಂಚುಗಳನ್ನು ಬಹಿರಂಗಪಡಿಸುವ ವ್ಯಕ್ತಿಯನ್ನು ನಾಶ ಮಾಡುವುದೇ ಬಿಜೆಪಿಯವರ ಉದ್ದೇಶವಾಗಿದೆ. ಹೇಡಿ, ಸರ್ವಾಧಿಕಾರಿ ಬಿಜೆಪಿ ಸರ್ಕಾರ ರಾಹುಲ್ ಗಾಂಧಿ ಮತ್ತು ಪ್ರತಿಪಕ್ಷಗಳ ಮೇಲೆ ಕೆರಳಿಸುತ್ತಿದೆ. ನಾವು ಅವರ ದುಷ್ಕೃತ್ಯಗಳನ್ನು ಬಹಿರಂಗಪಡಿಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರ.
ತನ್ನ ರಾಜಕೀಯ ದಿವಾಳಿತನದ ಅಡಿಯಲ್ಲಿ, ಮೋದಿ ಸರ್ಕಾರ ಪೆÇಲೀಸ್, ಇಡಿಯನ್ನು ಬಳಸಿಕೊಂಡು ಪ್ರತಿಪಕ್ಷಗಳನ್ನು ಕಟ್ಟಿಹಾಕುವ ಕೆಲಸ ಮಾಡುತ್ತಿದೆ. ಸಂಸತ್ತಿನಲ್ಲಿ ಗಟ್ಟಿ ಧ್ವನಿಗಳನ್ನು ಹತ್ತಿಕ್ಕಲು ಇಂತಹ ಕುತಂತ್ರಗಳನ್ನು ಅನುಸರಿಸುತ್ತಿದೆ. ಬಿಜೆಪಿಯ ಇಂತಹ ದುಷ್ಕೃತ್ಯಗಳಿಗೆ ಕಾಂಗ್ರೆಸ್ ಎಂದಿಗೂ ಹೆದರುವುದಿಲ್ಲ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆಯಿದ್ದು ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಮುಖಂಡರಾದ ಟಿ.ಬಿ.ಚಿಕ್ಕಣ್ಣ, ಕೆ.ಮರಿಗೌಡ, ನಾಗೇಶ್, ಎಲ್.ಭಾಸ್ಕರ್, ಸುನಂದಾಕುಮಾರ್, ಲತಾ ಸಿದ್ದಶೆಟ್ಟಿ ಮೈಸೂರು ಬಸವಣ್ಣ, ಭಾಸ್ಕರ್ ಎಲ್.ಗೌಡ, ನಜರಬಾದ್ ನಟರಾಜ್ ಸೇರಿದಂತೆ ಮತ್ತಿತರರು ಇದ್ದರು.