ರಾಹುಲ್ ಆದಿತ್ಯರಿಂದ ಹೊಸ ಶಕ್ತಿ ಉದಯ

ಮುಂಬೈ,ನ೧೨:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಶಿವಸೇನಾದ ಯುವ ನಾಯಕ ಆದಿತ್ಯ ಠಾಕ್ರೆ ಇಬ್ಬರು ‘ಪ್ರಮುಖ ಯುವ ನಾಯಕರು‘ ಹಾಗೂ ಈ ಇಬ್ಬರು ಯುವನಾಯಕರಿಂದ ದೇಶದಲ್ಲಿ ಹೊಸ ಶಕ್ತಿ ಉದಯವಾಗಲಿದೆ ಎಂದು ಶಿವಸೇನಾದ ರಾಜ್ಯಸಭಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ ಅವರು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾದ ಬಳಿಕ ಅವರು ಮಾತನಾಡಿದರು.
‘ಎರಡು ಪ್ರಮುಖ ಯುವ ನಾಯಕರಾದ ರಾಹುಲ್ ಗಾಂಧಿ ಹಾಗೂ ಆದಿತ್ಯ ಠಾಕ್ರೆ, ಇಬ್ಬರೂ ಭಾರತವನ್ನು ಒಂದುಗೂಡಿಸಲು ಹೆಜ್ಜೆ ಹಾಕಲಿದ್ದಾರೆ. ಇದು ಹೊಸ ಶಕ್ತಿಯ ಉದಯಕ್ಕೆ ಕಾರಣವಾಗಲಿದೆ. ಈ ಇಬ್ಬರು ಯುವ ನಾಯಕರು ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ‘ ಎಂದು ಅವರು ಹೇಳಿದ್ದಾರೆ.
‘ರಾಹುಲ್ ಗಾಂಧಿ ಹಾಗೂ ಆದಿತ್ಯ ಇಬ್ಬರೂ ರಾಜ್ಯ ಹಾಗೂ ದೇಶಕ್ಕೆ ಕೆಲಸ ಮಾಡುವ ಅಪಾರ ಸಾಮರ್ಥ್ಯ ಹೊಂದಿದ್ದಾರೆ‘ ಎಂದು ರಾವುತ್ ಹೊಗಳಿದ್ದಾರೆ.
ಇದೇ ವೇಳೆ ಉದ್ದವ್ ಠಾಕ್ರೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಒಟ್ಟಾಗಲಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇಬ್ಬರ ತಾತಂದಿರ ನಡುವೆ ಉತ್ತಮ ಬಾಂಧವ್ಯ ಇತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಪ್ರಭೋದಂಕರ್ ಠಾಕ್ರೆ ಇಬ್ಬರೂ ಸಂಯುಕ್ತ ಮಹಾರಾಷ್ಟ್ರ ಚಳವಳಿಯಲ್ಲಿ ಭಾಗಿಯಾಗಿದ್ದರು. ಅಂಬೇಡ್ಕರ್ ಅವರಿಗೆ ಮರಾಠಿ ಅಸ್ಮಿತೆ ಬಗ್ಗೆ ಬಲವಾದ ಒಲವಿತ್ತು‘ ಎಂದು ಹೇಳಿದ್ದಾರೆ.