ರಾಹುಲ್ ಅರ್ಜಿ ವಿಚಾರಣೆ ಆ.೪ ಕ್ಕೆ

ನವದೆಹಲಿ.ಜು೨೧:ಮೋದಿ ಉಪನಾಮ’ ಹೇಳಿಕೆ ಮಾನಹಾನಿ ಪ್ರಕರಣದಲ್ಲಿ ಸೂರತ್ ಜಿಲ್ಲಾ ನ್ಯಾಯಾಲಯ ನೀಡಿದ್ದ ಶಿಕ್ಷೆಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದ್ದು ವಿಚಾರಣೆಯನ್ನು ಆಗಸ್ಟ್ ೪ ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಪಿ.ಕೆ.ಮಿಶ್ರಾ ಅವರ ಪೀಠವು ಇಂದು ವಿಷಯವನ್ನು ಆಲಿಸಿತು. ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ಈ ವಿಷಯವನ್ನು ಉಲ್ಲೇಖಿಸಿ ತುರ್ತು ವಿಚಾರಣೆಯನ್ನು ಕೋರಿದ ನಂತರ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಜುಲೈ ೧೮ ರಂದು ರಾಹುಲ್ ಗಾಂಧಿ ಅವರ ಮನವಿಯನ್ನು ಆಲಿಸಲು ಒಪ್ಪಿಕೊಂಡಿತ್ತು.
ಜುಲೈ ೭ ರ ಹೈಕೋರ್ಟ್ ತೀರ್ಪನ್ನು ತಡೆಹಿಡಿಯದಿದ್ದರೆ, ಅದು “ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ, ಚಿಂತನೆ ಮತ್ತು ಹೇಳಿಕೆಗೆ ಧಕ್ಕೆ ತರುತ್ತದೆ” ಎಂದು ರಾಹುಲ್ ಗಾಂಧಿ ತಮ್ಮ ಮೇಲ್ಮನವಿಯಲ್ಲಿ ಹೇಳಿದ್ದಾರೆ.