ರಾಹುಲ್ ಅನರ್ಹ ಪ್ರಜಾಪ್ರಭುತ್ವ ತತ್ವ ಅನ್ವಯವಾಗಲಿ

ನವದೆಹಲಿ,ಮಾ.೩೦- ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ನಂತರ ಲೋಕಸಭೆಯಿಂದ ಅನರ್ಹಗೊಂಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಕರಣದಲ್ಲಿ “ಮೂಲಭೂತ ಪ್ರಜಾಪ್ರಭುತ್ವದ ತತ್ವಗಳು” ಅನ್ವಯವಾಗಬೇಕು ಎಂದು ಜರ್ಮನ್ ವಿದೇಶಾಂಗ ಸಚಿವಾಲಯ ಹೇಳಿದೆ.

“ಭಾರತದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ಮೊದಲ ಪ್ರಕರಣದ ತೀರ್ಪು ಗಮನಿಸಿದ್ದೇವೆ ರಾಹುಲ್ ಗಾಂಧಿ ಅವರ ಲೋಕಸಭಾ ಸ್ಥಾನ ರದ್ದು ಮಾಡಲಾಗಿದೆ. ಮಾಹಿತಿ ಪ್ರಕಾರ ರಾಹುಲ್ ಗಾಂಧಿ ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಸ್ಥಿತಿಯಲ್ಲಿದ್ದಾರೆ” ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

“ಈ ತೀರ್ಪು ನ್ಯಾಯಾಲಯದಲ್ಲಿ ನಿಲ್ಲಲಿದೆಯೇ ಅಥವಾ ನ್ಯಾಯಾಲಯದ ಆದೇಶದ ಅಮಾನತು ಯಾವುದೇ ಆಧಾರವನ್ನು ಹೊಂದಿದೆಯೇ ಎಂಬುದರ ಮೇಲೆ ಸ್ಪಷ್ಟವಾಗುತ್ತದೆ” ಎಂದು ಹೇಳಿದ್ದಾರೆ.

“ನ್ಯಾಯಾಂಗ ಸ್ವಾತಂತ್ರ್ಯದ ಮಾನದಂಡಗಳು ಮತ್ತು ಮೂಲಭೂತ ಪ್ರಜಾಪ್ರಭುತ್ವದ ತತ್ವಗಳು” ಪ್ರಕರಣದಲ್ಲಿ ಅನ್ವಯವಾಗುತ್ತವೆ ಎಂದು ಜರ್ಮನಿ ನಿರೀಕ್ಷಿಸುತ್ತದೆ ಎಂದು ವಕ್ತಾರರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ’ಮೋದಿ ಉಪನಾಮ’ ಹೇಳಿಕೆಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ದಿನಾಂಕದಿಂದ ಲೋಕಸಭೆಯ ಸದಸ್ಯರಾಗಿ ಕಳೆದ ವಾರ ಅನರ್ಹವಾಗಿದ್ದರು.

೨೦೧೯ ರಲ್ಲಿ ಕರ್ನಾಟಕದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾಡಿದ ’ಮೋದಿ ಉಪನಾಮ’ ಹೇಳಿಕೆಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಈ ಬೆಳವಣಿಗೆ ನಡೆದಿದೆ.