ರಾಹುಲ್‌ಗೆ ರಾಜ್‌ನಾಥ್ ತಿರುಗೇಟು

ನವದೆಹಲಿ,ಡಿ.೩೦- ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ವಿರುದ್ಧ ಕಿಡಿಕಾರಿರುವ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ತಾವು ರೈತ ಕುಟುಂಬದಲ್ಲಿ ಜನಿಸಿದ್ದು ಕೃಷಿಯ ಬಗ್ಗೆ ರಾಹುಲ್‌ಗಾಂಧಿ ಅವರಿಗಿಂತ ಹೆಚ್ಚಾಗಿ ತಿಳಿದುಕೊಂಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಖಾಸಗಿ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ನರೇಂದ್ರ ಮೋದಿ ಅವರು ಬಡ ಕುಟುಂಬದಲ್ಲಿ ಜನಿಸಿದ್ದಾರೆ. ತಾವು ಕೂಡ ರೈತ ಕುಟುಂಬದಲ್ಲಿ ಜನಿಸಿದ್ದೇವೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ರಾಹುಲ್‌ಗಾಂಧಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರ ಪರವಾಗಿದೆ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆದರೆ, ರೈತರೊಂದಿಗೆ ಮಾತುಕತೆ ನಡೆಸಬೇಕೇ ಬೇಡವೇ ಎಂಬುದನ್ನು ಅವರ ಮನಃಸ್ಥಿತಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.
ತಿದ್ದುಪಡಿಗಳನ್ನು ಮಾಡಿ ನೂತನ ಕೃಷಿ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದ ಅವರು, ಬಡವರು ಮತ್ತು ರೈತರ ಸೂಕ್ಷ್ಮತೆಯನ್ನು ಸರ್ಕಾರ ಅರಿತಿದೆ. ನಿಮ್ಮ ನೋವು ನಮ್ಮ ನೋವು ಎಂದು ಭಾವಿಸಿದ್ದೇವೆ.ಹೀಗಾಗಿ ಸರ್ಕಾರ ಯಾವುದೇ ಕಾರಣಕ್ಕೂ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ತೀರ್ಮಾನಗಳನ್ನು ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
ರಾಹುಲ್ ಅವರು ವಯಸ್ಸಿನಲ್ಲಿ ತಮಗಿಂತ ಚಿಕ್ಕವರಾಗಿದ್ದಾರೆ.ಹೀಗಾಗಿ ಅವರಿಗಿಂತ ಕೃಷಿಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇನೆ. ಹೀಗಾಗಿ ರೈತರ ವಿರುದ್ಧವಾಗಿ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಹೇಳಿದರು.
ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಕೋರಿ ರಾಹುಲ್‌ಗಾಂಧಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು ರೈತರ ಮನಸ್ಸಿನಲ್ಲಿ ಕೆಲವೊಂದು ಸಂದೇಹಗಳನ್ನು ಸೃಷ್ಟಿಸಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.