
ತಿರುವನಂತಪುರಂ, ಮೇ.೨೩- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಯನಾಡಿನಲ್ಲಿ ಉಳಿದರೆ ಉತ್ತರ ಪ್ರದೇಶದ ಅಮೇಥಿ ಸಂಸದರಾಗಿದ್ದಾಗ ಆದ ಗತಿಯೇ ಆಗಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ.
ತಿರುವನಂತಪುರಂನಲ್ಲಿ ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಕೇರಳ ಘಟಕವು ಆಯೋಜಿಸಿದ್ದ ರಾಜ್ಯ ಮಟ್ಟದ ಮಹಿಳಾ ಕಾರ್ಮಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿಯನ್ನು ಅಮೇಠಿಯಿಂದ ಕಳುಹಿಸಿದ ಅದೃಷ್ಟವನ್ನು ನಾನು ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಅದಕ್ಕೆ ಕಾರಣ ಅವರು ಅಮೇಥಿ ಸಂಸದರಾಗಿದ್ದಾಗ ಅಲ್ಲಿನ ಶೇ ೮೦ರಷ್ಟು ಜನರಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ, ಜಿಲ್ಲಾಧಿಕಾರಿ ಕಚೇರಿ, ಅಗ್ನಿಶಾಮಕ ಠಾಣೆ, ವೈದ್ಯಕೀಯ ಕಾಲೇಜು, ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆ ಇರಲಿಲ್ಲ.
ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಅಥವಾ ಎಕ್ಸ್ ರೇ ಯಂತ್ರ ಇರಲಿಲ್ಲ. ಅವರು ಹೋದ ನಂತರ, ಈ ಎಲ್ಲಾ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳು ಅಲ್ಲಿ ಸಿಕ್ಕಿವೆ ಎಂದು ಅವರು ಹೇಳಿದರು.
ಸದ್ಯ ರಾಹುಲ್ ವಯನಾಡಿನಲ್ಲಿ ಉಳಿದುಕೊಂಡರೆ, ಅಮೇಥಿಯಂತೆಯೇ ಅದು ಕೂಡ ಅನುಭವಿಸುತ್ತದೆ. ಆದ್ದರಿಂದ, ಅವರನ್ನು ಇಲ್ಲಿ ಉಳಿಸಿಕೊಳ್ಳುವುದಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು ಎಂದರು.
ತಾವು ದೆಹಲಿ ಅಥವಾ ಅಮೇಠಿಯಲ್ಲಿದ್ದರೂ, ವಯನಾಡಿನ ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಆದ್ದರಿಂದ ಇಲ್ಲಿನ ೨೫೦ ಅಂಗನವಾಡಿಗಳನ್ನು ’ಸಕ್ಷಮ್’ (ಸಮರ್ಥ) ಅಂಗನವಾಡಿಗಳಾಗಿ ಪರಿವರ್ತಿಸಲು ನಿರ್ಧರಿಸಿರುವುದಾಗಿ ಅವರು ಉಲ್ಲೇಖಿಸಿದರು.
ಸಕ್ಷಮ್ ಅಂಗನವಾಡಿಯು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅಂಗನವಾಡಿಗಳಿಗೆ ಆರು ಸೇವೆಗಳ ಪ್ಯಾಕೇಜ್ ಅನ್ನು ಒದಗಿಸುತ್ತವೆ. ಅವುಗಳೆಂದರೆ ಪೂರಕ ಪೋಷಣೆ, ಪೂರ್ವ ಶಾಲಾ ಅನೌಪಚಾರಿಕ ಶಿಕ್ಷಣ, ಪೋಷಣೆ ಮತ್ತು ಆರೋಗ್ಯ ಶಿಕ್ಷಣ, ರೋಗನಿರೋಧಕ, ಆರೋಗ್ಯ ತಪಾಸಣೆ ಮತ್ತು ಹಲವು ಸೇವೆಗಳನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ಒದಗಿಸಲಾಗುತ್ತದೆ.
ರಾಜ್ಯದಲ್ಲಿ ಮಹಿಳಾ ಸುರಕ್ಷತೆಯ ಕೊರತೆಯಿದೆ ಎಂಬ ಆರೋಪದ ಕುರಿತು ಇತ್ತೀಚೆಗೆ ರಾಜ್ಯದ ತಾಲೂಕು ಆಸ್ಪತ್ರೆಯಲ್ಲಿ ಯುವ ವೈದ್ಯೆ ವಂದನಾ ದಾಸ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಹೇಳಿದ ಸ್ಮೃತಿ ಇರಾನಿ, ರಾಜ್ಯದಲ್ಲಿ ಇಂತಹ ಘಟನೆ ನಡೆದಿರುವುದು ಅಚ್ಚರಿ ತಂದಿದೆ ಎಂದರು.