ರಾಹುಲ್‌ರನ್ನು ಸದ್ದಾಂಗೆ ಹೋಲಿಸಿದ ಅಸ್ಸಾಂ ಸಿಎಂ

ಅಹಮದಾಬಾದ್,ನ,೨೩- ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿರುವ ನಡುವೆಯೇ ಮತ್ತೊಬ್ಬರ ಮೇಲೆ ಕೆಸರೆರಚಾಟ ಮುಂದುವರಿದಿದ್ದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹಲ್ ಗಾಂಧಿ ಅವರು ಸದ್ದಾಂ ಹುಸೇನ್ ರೀತಿ ಕಾಣುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮಾ ಬಿಸ್ವಾ ವ್ಯಂಗ್ಯವಾಡಿದ್ದಾರೆ.
ಅಹಮದಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ ಅವರು ರಾಹುಲ್ ಗಾಂಧಿ ಅವರನ್ನು ಸದ್ದಾಂ ಹುಸೇನ್‌ಗೆ ಹೋಲಿಕೆ ಮಾಡಿದ್ದಾರೆ ಇದಕ್ಕೆ ಕಾಂಗ್ರೆಸ್ ತೀವ್ರ ಟೀಕಾ ಪ್ರಹಾರ ನಡೆಸಿದೆ.
ರಾಹುಲ್ ಗಾಂಧಿ ಚುನಾವಣೆಗೂ ಮುನ್ನ ಗುಜರಾತ್‌ಗೆ ಭೇಟಿ ನೀಡದೇ ಇರುವುದನ್ನು ಪ್ರಶ್ನಿಸಿದ ಅವರು ರಾಜ್ಯದಲ್ಲಿ ರಾಹುಲ್ ಗಾಂಧಿ ಅದೃಶ್ಯರಾಗಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಸಂದರ್ಶಕ ಪ್ರಾಧ್ಯಾಪಕರಂತೆ ಗುಜರಾತ್‌ಗೆ ಭೇಟಿ ನೀಡುತ್ತಾರೆ.ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲಿಲ್ಲ.ಬಹುಶಃ ಅವರಿಗೆ ಸೋಲುವ ಭಯ ಇರಬೇಕು ಎಂದು ಅಣಕವಾಡಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಬಾಲಿವುಡ್ ತಾರೆಯರಾದ ನಟರಾದ ಪೂಜಾ ಭಟ್ ಮತ್ತು ಅಮೋಲ್ ಪಾಲೇಕರ್ ಸೇರಿದಂತೆ ಮತ್ತಿತರಿಗೆ ಹಣ ನೀಡಲಾಗಿದೆ ಎಂದು ಗಂಭಿರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಇತ್ತೀಚಿನ ಅಧ್ಯಕ್ಷೀಯ ಚುನಾವಣೆಗಳ ಬಗ್ಗೆ ಕಾಂಗ್ರೆಸ್ ಲೇವಡಿ ಮಾಡಿದ ಅವರು ಅಧ್ಯಕ್ಷೀಯ ಅಭ್ಯರ್ಥಿ ಶಶಿತರೂರ್‌ಗೆ ಮತ ಹಾಕಿದ ಕಾಂಗ್ರೆಸ್ ಪಕ್ಷದ ನಾಯಕರು ಶೀಘ್ರದಲ್ಲೇ ಬಿಜೆಪಿಗೆ ಸೇರುತ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಗುಜರಾತ್‌ನಲ್ಲಿ ಡಿಸೆಂಬರ್ ೧ ಮತ್ತು ೫ ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಡಿಸೆಂಬರ್ ೮ ರಂದು ಮತ ಎಣಿಕೆ ನಡೆಯಲಿದೆ.