ರಾಹುಲ್‌ಗೆ ೨ ವರ್ಷ ಜೈಲು ಸಂಜೆ ಕಾಂಗ್ರೆಸ್ ಸಭೆ

ನವದೆಹಲಿ,ಮಾ.೨೪- ಮಾನನಷ್ಟ ಪ್ರರಕಣದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷ ವಿಧಿಸಿರುವ ಸೂರತ್ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪ್ರಕರಣವನ್ನು ಕಾನೂನುಬದ್ಧವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ದೇಶಾದ್ಯಂತ ಹೋರಾಡಲು ಕಾಂಗ್ರೆಸ್ ನಿರ್ಧರಿಸಿದ್ದು ಸಂಜೆ ಮಹತ್ವದ ಸಭೆ ಕರೆದಿದೆ.
ಈ ನಡುವೆ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ವಿರುದ್ದ ಅಪರಾಧದ ಪ್ರಕರಣದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಿದೆ. ಇತರ ವಿರೋಧ ಪಕ್ಷಗಳೊಂದಿಗೆ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ವಿವರ ನೀಡಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಇಂದು ಸಂಜೆ ೫ ಗಂಟೆಗೆ ಕಾಂಗ್ರೆಸ್ ತನ್ನ ಪ್ರಮುಖ ನಾಯಕರ ತುರ್ತು ಸಭೆ ನಡೆಸಿ ಹೋರಾಟ ನಡೆಸಲು ನಿರ್ಧರಿಸಿದೆ.
ಸಂಜೆ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ತನ್ನ ಸ್ಟೀರಿಂಗ್ ಸಮಿತಿ ಸದಸ್ಯರು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಮತ್ತು ಮುಂಚೂಣಿ ಸಂಘಟನೆಗಳ ಮುಖ್ಯಸ್ಥರ ತುರ್ತು ಸಭೆಯನ್ನು ಕರೆಯಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಮುಂದಾಗಿದೆ.
ನಿನ್ನೆ ನ್ಯಾಯಾಲಯ ತೀರ್ಪು ನೀಡಿದ ಬಳಿಕ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದು ಅದನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಜೊತೆಗೆ ಈ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯವಾಗಿಯೂ ಹೋರಾಟ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಅವರಿಗೆ ಮಾನನಷ್ಠ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷ ನೀಡಿರುವ ಪ್ರಕರಣ ವಿರೋಧ ಪಕ್ಷದ ನಾಯಕರ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಲು ಸಹಕಾರಿಯಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಸಂಜೆ ನಡೆಯುವ ಕಾಂಗ್ರೆಸ್ ಪ್ರಮುಖ ನಾಯಕರ ಸಭೆ ಮಹತ್ವ ಪಡೆದುಕೊಂಡಿದೆ,