ಅಯೋಧ್ಯಾ,ಏ.೪- ಪವಿತ್ರ ಪಟ್ಟಣದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾದ ಅಯೋಧ್ಯೆಯ ಹನುಮಾನ್‌ಗರ್ಹಿ ದೇವಸ್ಥಾನದ ಅರ್ಚಕರೊಬ್ಬರು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸಿದ್ದು ರಾಹುಲ್‌ಗೆ ನಿವಾಸ ನೀಡಲು ಮುಂದಾಗಿದ್ದಾರೆ.
೧೦ನೇ ಶತಮಾನದ ದೇವಾಲಯದ ಆವರಣದಲ್ಲಿ ಅವರಿಗೆ ನಿವಾಸ ನೀಡುವುದಾಗಿ ದೇವಸ್ಥಾನದ ಪ್ರಧಾನ ಅರ್ಚಕ ಮಹಂತ್ ಜ್ಞಾನ್ ದಾಸ್ ಅವರ ಉತ್ತರಾಧಿಕಾರಿಯಾಗಿರುವ ಹನುಮಾನ್ ಗರ್ಹಿ ದೇವಸ್ಥಾನದ ಮಹಂತ್ ಸಂಜಯ್ ದಾಸ್ ಅವರು ಪ್ರಕಟಿಸಿದ್ದಾರೆ.
ಮೋದಿ ಉಪನಾಮದ ಮಾನಹಾನಿ ಪ್ರಕರಣದ ಹಿನ್ನೆಲೆಯಲ್ಲಿ ಸೂರತ್ ನ್ಯಾಯಾಲಯದಿಂದ ೨ ವರ್ಷ ಜೈಲು ಶಿಕ್ಷೆಗೆ ಒಳಗಾಗಿ ಲೋಕಸಭಾ ಸದಸ್ಯ ಸ್ಥಾನ ಕಳೆದುಕೊಂಡಿರುವ ರಾಹುಲ್ ಗಾಂಧಿ ಅವರಿಗೆ ಈ ತಿಂಗಳ ೨೩ರ ಒಳಗೆ ದೆಹಲಿಯ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಲೋಕಸಭಾ ಸಚಿವಾಲಯ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ತಮ್ಮ ನಾಯಕನಿಗೆ ಮನೆ ನೀಡಲು ಮುಂದಾಗಿರುವ ನಡುವೆ ಅಯೋಧ್ಯೆ ದೇವಾಲಯದ ಅರ್ಚಕರೊಬ್ಬರು ತಾವೂ ಮನೆ ನೀಡುವುದಾಗಿ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
“ರಾಹುಲ್ ಗಾಂಧಿ ಅವರು ಅಯೋಧ್ಯೆಗೆ ಬರಬೇಕು ಮತ್ತು ಹನುಮಂತನಗರಕ್ಕೆ ಭೇಟಿ ನೀಡಬೇಕು ಮತ್ತು ಇಲ್ಲಿ ಪ್ರಾರ್ಥನೆ ಸಲ್ಲಿಸಬೇಕು. ಹನುಮಾನಗರ್ಹಿ ದೇವಸ್ಥಾನದ ಆವರಣದಲ್ಲಿ ಇಂತಹ ಅನೇಕ ಆಶ್ರಮಗಳಿವೆ. ಅವರು ನಮ್ಮ ಆಶ್ರಮಕ್ಕೆ ಬಂದು ಉಳಿಯಬೇಕು ಇದರಿಂದ ನಮಗೂ ಸಂತೋಷವಾಗುತ್ತದೆ ಎಂದು ಸಂಜಯ್ ದಾಸ್ ಹೇಳಿದ್ದಾರೆ
೨೦೧೬ರಲ್ಲಿ ಮಹಂತ್ ಜ್ಞಾನ್ ದಾಸ್ ಆಶೀರ್ವಾದ ಪಡೆಯಲು ರಾಹುಲ್ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಈ ವರ್ಷದ ಆರಂಭದಲ್ಲಿ ಗಾಜಿಯಾಬಾದ್‌ನ ಲೋನಿಯಿಂದ ರಾಹುಲ್ ಗಾಂಧಿ ಅವರ ಮೂರು ದಿನಗಳ ಉತ್ತರ ಪ್ರದೇಶದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ಮಾಜಿ ಸಂಸದರು ಅಯೋಧ್ಯೆಯ ರಾಮಜನ್ಮಭೂಮಿ ದೇವಾಲಯದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರಿಂದ ಆಶೀರ್ವಾದ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.