ರಾಹುಲ್‌ಗೆ ತಪ್ಪದ ಸಂಕಷ್ಟ

ಸೂರತ್,ಏ.೨೦: ಮೋದಿ ಉಪನಾಮ ಟೀಕೆ ಕುರಿತಂತೆ ತಮಗೆ ನೀಡಲಾಗಿರುವ ೨ ವರ್ಷ ಜೈಲು ಶಿಕ್ಷೆಗೆ ತಡೆ ನೀಡಬೇಕೆಂದು ಕೋರಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್‌ನ ಹೆಚ್ಚುವರಿ ಸೆಷೆನ್ಸ್ ನ್ಯಾಯಾಲಯ ಇಂದು ತಿರಸ್ಕರಿಸಿದೆ. ಇದರಿಂದಾಗಿ ಕಾನೂನು ಸಮರದಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆ ಉಂಟಾಗಿದ್ದು, ಸಂಕಷ್ಟ ಎದುರಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಪರ ವಕೀಲರು ಸೆಷೆನ್ಸ್ ನ್ಯಾಯಾಲಕ್ಕೆ ೨ ಅರ್ಜಿಗಳನ್ನು ಸಲ್ಲಿದ್ದರು. ನ್ಯಾಯಾಲಯ ನೀಡಿರುವ ಶಿಕ್ಷೆಗೆ ತಡೆ ನೀಡುವುದು ಹಾಗೂ ರಾಹುಲ್ ಗಾಂಧಿ ಸಲ್ಲಿಸಿರುವ ಮನವಿ ಇತ್ಯರ್ಥವಾಗುವತನಕ ಶಿಕ್ಷೆ ಜಾರಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದರು.ಈ ಎರಡೂ ಮನವಿಗಳ ವಿಚಾರಣೆ ನಡೆಸಿದ್ದ ಸೆಷೆನ್ಸ್ ನ್ಯಾಯಾಲಯ ಇಂದು ತೀರ್ಪು ಕಾಯ್ದಿರಿಸಿತ್ತು. ಈ ಬಗ್ಗೆ ಇಂದು ತೀರ್ಪು ನೀಡಿದ ನ್ಯಾಯಾಲಯ, ರಾಹುಲ್ ಗಾಂಧಿ ಮಾಡಿದ ಮನವಿಯನ್ನು ತಿರಸ್ಕರಿಸಿದೆ. ಒಂದು ವೇಳೆ ಶಿಕ್ಷೆಗೆ ತಡೆಯಾಜ್ಞೆ ಸಿಕ್ಕಿದ್ದರೆ ಲೋಕಸಭಾ ಸದಸ್ಯತ್ವ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ,ಉಳಿಸಿಕೊಳ್ಳುವ ಸಾಧ್ಯತೆ ಇತ್ತು. ಈಗ ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ನಲ್ಲಿ ಕಾನೂನ ಸಮರ ನಡೆಸಲು ರಾಹುಲ್ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.ಕೋಲಾರದಲ್ಲಿ ೨೦೧೯ರ ಲೋಕಸಭಾ ಚುನಾವಣಾ ಪ್ರಚಾರದ ಸಭೆಯಲ್ಲಿ ಭಾಷಣ ಮಾಡಿದ ರಾಹುಲ್, ’ಎಲ್ಲ ಕಳ್ಳರಿಗೂ ಮೋದಿ’ಎಂಬ ಉಪನಾಮ ಏಕಿದೆ ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಯನ್ನು ಪ್ರಶ್ನಿಸಿ ಸೂರತ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಪೂರ್ಣೇಶ್‌ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ್ದ ಸೂರತ್ ನ್ಯಾಯಾಲಯ, ರಾಹುಲ್ ಗಾಂಧಿ ಅವರಿಗೆ ೨ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿತ್ತು.ಮೇಲ್ಮನವಿ ಸಲ್ಲಿಸಲು ನ್ಯಾಯಲಯ ಅವಕಾಶ ಕೊಟ್ಟು ತೀಪನ್ನು ೩೦ ದಿನಗಳ ಕಾಲ ಅಮಾನತ್ತಿನಲ್ಲಿಟ್ಟಿದೆ. ರಾಹುಲ್ ಗಾಂಧಿಗೆ ೨ ವರ್ಷ ಜೈಲುಶಿಕ್ಷೆ ಪ್ರಕಟಗೊಂಡ ಮರುದಿನವೇ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್, ದೇಶದ ಹಲವೆಡೆ ಭಾರಿ ಪ್ರತಿಭಟನೆ ನಡೆಸಿತ್ತು.ಈ ಪ್ರಕ್ರಿಯೆ ನಂತರ ರಾಹುಲ್ ಗಾಂಧಿ ಅವರು ಕಾನೂನು ಸಮರಕ್ಕೆ ಮುಂದಾದರು. ಸೂರತ್‌ನ ಕೆಳ ಹಂತದದ ನ್ಯಾಯಾಲಯ ೨ ವರ್ಷ ಜೈಲು ಶಿಕ್ಷೆ ವಿಧಿಸಿದ ಕ್ರಮಕ್ಕೆ ತಡೆ ನೀಡಬೇಕೆಂದು ಕೋರಿ ಏ. ೩ ರಂದು ಸೆಷೆನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈಗ ಈ ಅರ್ಜಿಯನ್ನು ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಆರ್.ಪಿ. ಮೊಗೇರ ತಿರಸ್ಕರಿಸಿದ್ದಾರೆ.

ಮುಂದೇನು
ಮಾನನಷ್ಟ ಪ್ರಕರಣದಲ್ಲಿ ಸೆಷೆನ್ಸ್ ನ್ಯಾಯಾಲಯದಲ್ಲಿ ಶಿಕ್ಷೆಗೆ ತಡೆ ಸಿಗದ ಕಾರಣ ರಾಹುಲ್ ಗಾಂಧಿ ಹೈಕೋರ್ಟ್ ಕದ ತಟ್ಟಲು ಮುಂದಾಗಿದ್ದಾರೆ. ತಮಗೆ ನೀಡಿರುವ ಶಿಕ್ಷೆಗೆ ತಡೆ ನೀಡಬೇಕೆಂದು ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಬಹುದು, ಆದರೆ, ಮೇಲ್ಮನವಿ ಅರ್ಜಿಯನ್ನು ಯಾವಾಗ ಸಲ್ಲಿಸಬೇಕು ಎಂಬುದಾಗಿ ತೀರ್ಮಾನ ಕೈಗೊಳ್ಳುವುದಾಗಿ ರಾಹುಲ್ ಗಾಂಧಿ ಪರ ವಕೀಲರು ತಿಳಿಸಿದ್ದಾರೆ.