ರಾಸುಗಳ ಪೋಷಣೆಗೆ ವೈಜ್ಞಾನಿಕ ಪದ್ದತಿ ಅಳವಡಿಸಿಕೊಳ್ಳಿ

ಆನೇಕಲ್.ನ೧೧:ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿದ್ದು, ಗ್ರಾಮೀಣ ಭಾಗದ ರೈತರು ರಾಸುಗಳ ಪೋಷಣೆಯಲ್ಲಿ ವೈಜ್ಞಾನಿಕ ಪದ್ದತಿ ಅಳವಡಿಸಿಕೊಳ್ಳಬೇಕು ಎಂದು ಬಮೂಲ್ ನಿರ್ದೇಶಕ ಬಿ.ಜೆ.ಆಂಜಿನಪ್ಪ ರವರು ತಿಳಿಸಿದರು.
ಅವರು ತಾಲ್ಲೂಕಿನ ವಣಕನಹಳ್ಳಿ ಗ್ರಾಮದ ಸೋಮೇಶ್ವರ ದೇವಾಲಯದ ಆವರಣದಲ್ಲಿ ನಡೆದ ವಣಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೯-೨೦ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಸೀಮೆ ರಾಸುಗಳ ಸಾಕಾಣೆಯಲ್ಲಿ ಪಶು ಆಹಾರ ಮತ್ತು ಮೇವು ನೀಡುವ ಪದ್ದತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಮಳೆಗಾಲದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ಒಣ ಮತ್ತು ಹಸಿ ಮೇವನ್ನು ಕ್ರಮವಾಗಿ ರಾಸುಗಳಿಗೆ ಹಾಕುವುದರಿಂದ ಹಾಲಿನ ಇಳುವರಿ ಮತ್ತು ಕೊಬ್ಬಿನ ಅಂಶವುಳ್ಳ ಹಾಲನ್ನು ಪಡೆಯಬಹುದಾಗಿದೆ ಎಂದರು.
ಹಿಂದಿನ ಸಾಂಪ್ರದಾಯಿಕದಲ್ಲಿ ಹೈನುಗಾರಿಕೆಯಲ್ಲಿ ಲಾಭವನ್ನು ನೋಡಿ ನಮ್ಮ ಪೂರ್ವಿಕರು ಹಸುಗಳನ್ನು ಸಾಕುತ್ತಿರಲಿಲ್ಲ ಆದರೆ ಕಾಲ ಬದಲಾಗಿದ್ದು ಲಾಭಾಂಶದ ಮೂಲವನ್ನು ನೋಡಿ ಹಸುವನ್ನು ಸಾಕಾಣಿಕೆ ಮಾಡಲಾಗುತ್ತಿದೆ ಎಂದರು. ಕೃಷಿ ಚಟುವಟಿಕೆಯಲ್ಲಿ ರೈತರು ಆರ್ಥಿಕವಾಗಿ ಅಭಿವೃದ್ದಿಯಾಗುವುದಕ್ಕೆ ಸಾಧ್ಯತೆಗಳು ಕಡಿಮೆ ಇದ್ದು ಕೃಷಿ ಜೊತೆಗೆ ಹೈನು ಗಾರಿಕೆಯನ್ನು ಮುಖ್ಯ ಉಪಕಸುಬನ್ನಾಗಿ ಮಾಡಿಕೊಂಡರೆ ಆರ್ಥಿಕ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ಆನೇಕಲ್ ತಾಲ್ಲೂಕಿನಲ್ಲಿ ಹೈನು ಉದ್ಯಮ ರೈತರ ಜೀವನಾಡಿಯಾಗಿ ಮಾರ್ಪಾಟಿದ್ದು ಮತ್ತಷ್ಠು ಪ್ರಗತಿಗೆ ಬಮೂಲ್ ಮತ್ತು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ರೈತರ ಮನೆ ಭಾಗಿಲಿಗೆ ತಲುಪಿಸುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ಆನೇಕಲ್ ಶೀತಲ ಕೇಂದ್ರದ ಉಪ ವ್ಯವಸ್ಥಾಪಕ ಡಾ|| ಮೋಹನ್ ಕುಮಾರ್ ಮಾತನಾಡಿ ವಣಕನಹಳ್ಳಿ ಹಾಲು ಉತ್ಪಾದಕರ ಸಂಘದ ಲಾಭಾಂಶದಲ್ಲಿ ನಡೆಯುತ್ತಿದ್ದು ವಣಕನಹಳ್ಳಿ ಗ್ರಾಮದಲ್ಲಿ ಹೈನುಗಾರಿಕೆಗೆ ಪ್ರಗತಿಗೆ ಸಂಘವು ಮತ್ತಷ್ಠು ಯೋಜನೆಗಳನ್ನು ರೂಪಿಸಲಿ ಎಂದರು. ಹಾಲು ಗುಣಮಟ್ಟವಾಗಿದೆ ಎಂದರೆ ಕೇವಲ ಪ್ಯಾಟ್ ಅಲ್ಲ ಹಾಲು ಪರಿಶುದ್ದವಾಗಿರಬೇಕು ಈ ನಿಟ್ಟಿನಲ್ಲಿ ವಣಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ಸದಸ್ಯರಿಗೆ ಬಮೂಲ್ ನಿರ್ದೇಶಕ ಬಿ.ಜೆ. ಆಂಜಿನಪ್ಪರವರು ಉಚಿತವಾಗಿ ಹಾಲಿನ ಕ್ಯಾನ್ ಗಳನ್ನು ನೀಡುತ್ತಿದ್ದು ಪ್ರತಿಯೊಬ್ಬರು ತಪ್ಪದೆ ಸ್ಟೀಲ್ ಕ್ಯಾನ್ ಗಳಲ್ಲಿಯೇ ಹಾಲಿನ ಕೇಂದ್ರಗಳಿಗೆ ಹಾಲನ್ನು ಪೂರೈಕೆ ಮಾಡಬೇಕು ಎಂದರು. ಕಳೆದ ಹತ್ತಾರು ವರ್ಷಗಳಿಂದ ಕೆಲವು ತಾಂತ್ರಿಕ ಕಾರಣಗಳಿಂದ ತಾಲ್ಲೂಕಿನಲ್ಲಿ ಹಾಲಿನ ಗುಣಮಟ್ಟ ಕಡಿಮೆ ಇದ್ದು ಬಿ.ಜೆ.ಆಂಜಿನಪ್ಪರವರು ತಾಲ್ಲೂಕಿನಲ್ಲಿ ಬಮೂಲ್ ನಿರ್ಧೇಶಕರಾದ ಮೇಲೆ ಉತ್ತಮವಾಗಿ ಕೆಲಸ ನಿರ್ವಹಿಸಿದ ಪರಿಣಾಮವಾಗಿ ಇಂದು ಬೆಂಗಳೂರು ಹಾಲು ಒಕ್ಕೂಟದ ಹಾಲಿನ ಗುಣಮಟ್ಟದಲ್ಲಿ ಆನೇಕಲ್ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.
ವಿಸ್ತರಣಾದಿಕಾರಿ ರಮೇಶ್, ವಣಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ್ ರೆಡ್ಡಿ, ಉಪಾಧ್ಯಕ್ಷ ರಾಮರೆಡ್ಡಿ ಮತ್ತು ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಮೋಹನ್, ಹಾಲು ಪರೀಕ್ಷಕರು ಶ್ರೀನಿವಾಸರೆಡ್ಡಿ ಮತ್ತು ಗ್ರಾಮಸ್ಥರು ಇದ್ದರು.