ರಾಸಾಯನ ಮಿಶ್ರಿತ ನೀರು : ವಡ್ಲೂರು ಕೆರೆ – ಮೀನು ಸಾವು

ರಾಯಚೂರು.ಜು.೨೯- ರಾಸಾಯನಿಕ ಮಿಶ್ರಿತ ನೀರಿನಿಂದಾಗಿ ತಾಲೂಕಿನ ವಡ್ಲೂರು ಗ್ರಾಮದ ಕೆರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಮೀನುಗಳು ಸತ್ತಿವೆ. ನಿನ್ನೆ ಭಾರೀ ಪ್ರಮಾಣದಲ್ಲಿ ಸುರಿದ ಮಳೆಯ ಸಂದರ್ಭದಲ್ಲಿ ಕೈಗಾರಿಕಾ ಅಭಿವೃದ್ಧಿ ಕೇಂದ್ರದಲ್ಲಿರುವ ಕೈಗಾರಿಕೆಗಳಿಂದ ಹೊರ ಬಿಡಲಾದ ಅಪಾಯಕಾರಿ ರಾಸಾಯನಿಕತೆಯಿಂದ ಈ ಅನಾಹುತ ಸಂಭವಿಸಿದೆ. ಕೈಗಾರಿಕೆ ಘಟಕಗಳಿಂದ ಸಂಸ್ಕರಣಗೊಳ್ಳದೆ, ಅಪಾಯಕಾರಿ ರಾಸಾಯನ ಮಿಶ್ರಿತ ನೀರು ಹೊರ ಬಿಡುತ್ತಿರುವುದರಿಂದ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿವೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ವಿಶೇಷವಾಗಿ ಮೀನುಗಾರಿಕೆ ಇಲಾಖೆಗೆ ಮಾಹಿತಿ ನೀಡಿದರೂ, ಯಾವುದೇ ಉಪಯೋಗವಾಗಿಲ್ಲ. ಮೀನುಗಳು ಸತ್ತ ಘಟನೆಗೆ ಸಂಬಂಧಿಸಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾನುವಾರು ಅಥವಾ ಮಾನವರು ಈ ನೀರನ್ನು ಬಳಸಿದರೆ, ಮತ್ತಷ್ಟು ಪ್ರಾಣಹಾನಿ ಸಂಭವಿಸುವ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನ ಹರಿಸಿ, ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.