ರಾಸಾಯನಿಕ ವಿಪತ್ತು ನಿವಾರಣಾ ದಿನದಂಗವಾಗಿ ಸುರಕ್ಷತಾ ಕ್ರಮ ಐಒಸಿಎಲ್ ಪೆಟ್ರೋಲಿಯಂ ಘಟಕದಲ್ಲಿ ಭಾರೀ ಅಣಕು ಪ್ರದರ್ಶನ

ಕಲಬುರಗಿ, ಜು. 29:ಇಡೀ ಪರಿಸರದಲ್ಲಿ ಅಪಾಯದ ಸೈರನ್ ಮಾರ್ಧನಿಸುತ್ತಿತ್ತು… ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್. ಡಿ.ಆರ್.ಎಫ್), ರಾಜ್ಯ ವಿಪತ್ತು ನಿರ್ವಹಣಾ ತಂಡ,(ಎಸ್. ಡಿ.ಆರ್.ಎಫ್) ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್ ಗಳು….. ಹೀಗೆ ಒಂದರ ಹಿಂದೆ ಒಂದು ಧಾವಿಸಿ ಬಂದವು…. ಮೃತದೇಹಗಳು, ಗಾಯಾಳುಗಳನ್ನು ಹೊತ್ತೊಯ್ಯುತ್ತಿದ್ದ ರಕ್ಷಣಾ ಸಿಬ್ಬಂದಿ. ಇದೆಲ್ಲಾ ದೃಶ್ಯ ನೋಡುತ್ತಿದ್ದರೆ, ಏನೋ ಭಾರೀ ಅವಘಢ ಸಂಭವಿಸಿದಂತೆ ಭಾಸವಾಗುತ್ತಿತ್ತು.
ಹೌದು, ಇದು ನಂದೂರು ಕೈಗಾರಿಕಾ ಪ್ರದೇಶದಲ್ಲಿ ಇರುವ ಇಂಡಿಯನ್ ಆಯಿಲ್ ಕಾಪೆರ್Çೀರೇಶನ್ ಲಿಮಿಟೆಡ್ (ಐಒಸಿಎಲ್) ಪೆಟ್ರೋಲಿಯಂ ಘಟಕದಲ್ಲಿ ಕಂಡುಬಂದ ದೃಶ್ಯ. ಆದರೆ, ಇದು ನೈಜ ಘಟನೆಯಲ್ಲ, ಅಣುಕು ಪ್ರದರ್ಶನ!! ರಾಸಾಯನಿಕ ವಿಪತ್ತು ನಿವಾರಣಾ ದಿನಾಚರಣೆಯ ಅಂಗವಾಗಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕಾರ್ಖಾನೆಗಳು, ಬಾಯ್ಲರ್‍ಗಳ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಸಹಯೋಗದೊಂದಿಗೆ ವಿಪತ್ತು ನಿರ್ವಹಣೆ ಬಗ್ಗೆ ನಂದೂರು ಕೈಗಾರಿಕಾ ಪ್ರದೇಶದಲ್ಲಿರುವ ಐ.ಒ.ಸಿ.ಎಲ್ ಪೆಟ್ರೋಲಿಯಂ ಘಟಕದಲ್ಲಿ ಇಂದು ಅಣುಕು ಪ್ರದರ್ಶನ ಆಯೋಜಿಸಲಾಗಿತ್ತು.
ಅಪರ ಜಿಲ್ಲಾಧಿಕಾರಿ ಭೀಮಾಶಂಕರ್ ತೆಗ್ಗೆಳ್ಳಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಅಣಕು ಕಾರ್ಯಾಚರಣೆ ಭಾರೀ ಪ್ರಶಂಸೆಗೆ ಪಾತ್ರವಾಯಿತು.
ಘಟಕದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಪಾಯದ ಎಚ್ಚರಿಕೆ ಗಂಟೆಯನ್ನು ಮೊಳಗಿಸಲಾಯಿತು. ಮೊದಲೇ, ಶಹಾಬಾದ್ ರಸ್ತೆಯ ಶೆಟ್ಟಿ ಇಂಜಿನಿಯರಿಂಗ್ ಕಾಲೇಜ್ ಬಳಿ ಸಜ್ಜುಗೊಳಿಸಲಾಗಿದ್ದ ಅಗ್ನಿಶಾಮಕ ವಾಹನ, ಅಂಬುಲೆನ್ಸ್, ಎಸ್ ಡಿಆರ್ ಎಫ್ ಮತ್ತು ಎನ್ ಡಿಆರ್ ಎಫ್ ತಂಡಗಳು, ಕರೆ ಮಾಡುತ್ತಿದ್ದಂತೆ ಎಲ್ಲವೂ ದೌಡಾಯಿಸಿ ಬಂದು ರಕ್ಷಣಾ ಕಾರ್ಯಾಚರಣೆಗಿಳಿದವು. ತೈಲ ಘಟಕದ ರಕ್ಷಣಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಯು ಪೆಟ್ರೋಲಿಯಂ ಟ್ಯಾಂಕ್ ಗೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ನೀರು ಹಾಯಿಸಿದವು. ಎನ್.ಡಿ. ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್, ಕಾರ್ಖಾನೆಯ ರಕ್ಷಣಾ ಸಿಬ್ಬಂದಿಗಳು ಬೆಂಕಿಯಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಶ್ರಮಿಸಿದವು. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಅಣಕು ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು.
ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ಐ.ಒಸಿ.ಎಲ್ ಡಿಪೆÇೀಗೆ ಹೊಂದಿಕೊಂಡಿರುವ ಹಿಂದೂಸ್ಥಾನ್ ಪೆಟ್ರೋಲಿಯಂ ಕಾಪೆರ್Çೀರೇಷನ್ ಲಿಮಿಟೆಡ್ (ಎಚ್.ಪಿ.ಸಿ.ಎಲ್) ಹಾಗೂ ಯುನೈಟೆಡ್ ಸ್ಪಿರಿಟ್ ಕಂಪೆನಿಯ ಸಿಬ್ಬಂದಿಯನ್ನೂ ರಕ್ಷಣಾ ತಂಡಗಳು ರಕ್ಷಿಸಿವೆ.
ಇದಕ್ಕೂ ಮೊದಲು ಘಟಕದ ಸಭಾಂಗಣದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರು, ಜಿಲ್ಲೆಯಲ್ಲಿ ತೈಲ ಘಟಕಗಳಲ್ಲದೆ, ಸಕ್ಕರೆ ಕಾರ್ಖಾನೆ, ಜವಳಿ ಕಾರ್ಖಾನೆ, ದಾಲ್ ಮಿಲ್, ಸಿಮೆಂಟ್ ಕಾರ್ಖಾನೆ ಮುಂತಾದ ಬೃಹತ್ ಕೈಗಾರಿಕೆಗಳಿದ್ದು, ರಾಸಾಯನಿಕ ವಿಪತ್ತು ನಿವಾರಣಾ ದಿನದ ಅಂಗವಾಗಿ ಇಂದು ಅಣಕು ಕಾರ್ಯಚರಣೆ ನಡೆಸಿ, ಮುನ್ನೆಚ್ಚರಿಕೆಯಾಗಿ ಮುಂದಿನ ದಿನಗಳಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಐಒಸಿಎಲ್ ನ ಸಿನೀಯರ್ ಡಿಪೆÇೀ ಮ್ಯಾನೇಜರ್ ಆರ್. ನಿತಿನ್ ಗೀರ್ತಿ ಅವರು ಮಾತನಾಡಿ, ಕೆಲ ವರ್ಷಗಳ ಹಿಂದೆ ಜೈಪುರ್ ನ ಐಒಸಿಎಲ್ ಡಿಪೆÇೀದಲ್ಲಿ ಬೆಂಕಿ ಹೊತ್ತಿಕೊಂಡು ನಂದಿಸಲು ನಿಯಂತ್ರಣಕ್ಕೆ ಬಾರದೆ 11 ದಿನಗಳ ಕಾಲ ಸತತವಾಗಿ ಉರಿದು, ಅಪಾರ ತೈಲ ಭಸ್ಮವಾಗಿತ್ತು.

    ಆ ಘಟನೆಯ ನಂತರ ಎಲ್ಲಾ ತೈಲ ಕಂಪೆನಿಗಳು, ಬೃಹತ್ ಕೈಗಾರಿಕೆಗಳು ಸೇರಿದಂತೆ ಇಡೀ ವಿಶ್ವವೇ ಪಾಠ ಕಲಿತಿದೆ.  ಯಾವ ರೀತಿ ಸುರಕ್ಷತಾ ಕ್ರಮಗಳನ್ನು  ಅನುಸರಿಸಬೇಕೆಂಬುದನ್ನು ಪಾಲನೆ ಮಾಡಲಾಗುತ್ತಿದೆ  ಎಂಬ ಬಗ್ಗೆ ಮಾಹಿತಿ ನೀಡಿದರು.
    ಪೆಟ್ರೋಲಿಯಂ ಹಾಗೂ ಡೀಸೆಲ್ ಇವುಗಳು ಕೇವಲ ತೈಲವೆಂದು ಭಾವಿಸಬಾರದು, ಇವು ರಾಸಾಯನಿಕಗಳೆಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಾಗೃತಿ ಮೂಡಿಸಿದರು.
 ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್,  ಅಗ್ನಿಶಾಮಕ, ಗೃಹರಕ್ಷಕ ದಳ', ಸಾರಿಗೆ, ಆರೋಗ್ಯ, ಪೆÇಲೀಸ್, ಕಂದಾಯ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಪರಿಸರ ನಿಯಂತ್ರಣ ಮಂಡಳಿ, ಪಶುಸಂಗೋಪನೆ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಅಣಕು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.