ರಾಸಲೀಲೆ ಸಿಡಿ ಸೂತ್ರದಾರರಿಗೆ ಎಸ್‌ಐಟಿ ಬಲೆ

ಬೆಂಗಳೂರು,ಏ.೪-ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಯುವತಿಯನ್ನು ಐದು ದಿನಗಳ ಕಾಲ ಸತತ ವಿಚಾರಣೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ವಿಡಿಯೋ ಚಿತ್ರೀಕರಿಸಿದ ಮತ್ತು ಸಹಕರಿಸಿದವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಕೋವಿಡ್ ಆನ್‌ಲಾಕ್ ನಂತರ ಯುವತಿಯು ಹಾಗೂ ಮಾಜಿ ಸಚಿವರ ಖಾಸಗಿ ವಿಡಿಯೋ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿಯ ಆಧರಿಸಿ ವಿಡಿಯೋ ಸೂತ್ರದಾರರ ಪತ್ತೆಗೆ ಎಸ್‌ಐಟಿ ಅಧಿಕಾರಿಗಳು ತೊಡಗಿದ್ದಾರೆ.
ವಿಚಾರಣೆ ವೇಳೆ ಯುವತಿಯು ಕೆಲ ಮಾಹಿತಿ ನೀಡಿದ್ದು, ಇದರ ಆಧಾರದ ಮೇಲೆ ತನಿಖೆ ನಡೆಸಲು ಎಸ್‌ಐಟಿ ಮುಂದಾಗಿದೆ. ಶಂಕಿತರು ಎನ್ನಲಾದ ಕಿಂಗ್ ಪಿನ್ ನರೇಶ್ ಗೌಡ ಸೇರಿ ಹಲವರನ್ನು ರೌಂಡ್ ಅಪ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ..
ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಹೆಸರುಗಳು ಕೇಳಿ ಬಂದಿದ್ದು, ಯುವತಿಯ ಮೊಬೈಲ್ ವಶಪಡಿಸಿಕೊಂಡಿರುವ ಪೊಲೀಸರು ಕರೆಗಳ ವಿವರ ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ ಸಿಡಿ ಯುವತಿ ಹಾಗೂ ಮಾಜಿ ಸಚಿವರೊಬ್ಬರ ನಡುವೆ ಹೆಚ್ಚು ಕರೆಗಳು, ಸಂದೇಶ ವಿನಿಮಯ ಹಾಗೂ ಲಕ್ಷಾಂತರ ರೂ. ವ್ಯವಹಾರ ನಡೆದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಎಸ್‌ಐಟಿ ನೋಟೀಸ್:
ಹೀಗಾಗಿ ಪ್ರಕರಣದಲ್ಲಿ ಇನ್ನೊಬ್ಬ ಮಾಜಿ ಸಚಿವರು ಸಂದಿಗ್ದತೆಗೆ ಸಿಲುಕುವ ಸಂಭವವಿದೆ. ಈ ಸಂಬಂಧ ಮಾಜಿ ಸಚಿವರ ಪಾತ್ರ ಇದೆಯೋ ಅಥವಾ ಇಲ್ಲವೇ ಎಂಬುದು ವಿಚಾರಣೆಯಿಂದ ತಿಳಿದು ಬರಬೇಕಿದೆ.
ಅಲ್ಲದೆ ಅವರಿಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಆರೋಪವನ್ನು ಮಾಜಿ ಸಚಿವರು ಅಲ್ಲಗಳೆದಿದ್ದಾರೆ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ರೋಚಕ ತಿರುವು ಪಡೆದುಕೊಂಡಿದ್ದು ಮಾಜಿ ಸಚಿವರೊಬ್ಬರು ಸಿಡಿ ಯುವತಿ ಜೊತೆ ಅತೀ ಹೆಚ್ಚು ಬಾರಿ ಫೋನ್ ಸಂಭಾಷಣೆ ನಡೆಸಿದ್ದಾಗಿ ಎಸ್‌ಐಟಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಮಾಜಿ ಸಚಿವರ ಸ್ಪಷ್ಟನೆ:
ಸುಮಾರು ನಾಲ್ಕು ದಿನಗಳಿಂದ ಎಸ್‌ಐಟಿ ಸಿಡಿ ಯುವತಿಯ ವಿಚಾರಣೆ ನಡೆಸುತ್ತಿದೆ. ಇಂದು ಸಹ ಸಿಡಿ ಯುವತಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆಯುತ್ತಿದ್ದಾರೆ.
ಚಿತ್ರದುರ್ಗ ಮೂಲದ ಡಿ ಸುಧಾಕರ್ ಅವರು ೨೦೦೪ರಲ್ಲಿ ಚಳ್ಳಕೆರೆ ವಿಧಾನಸಭೆ ಕ್ಷೇತ್ರದಿಂದ, ೨೦೦೮ ಮತ್ತು ೨೦೧೩ರಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.
ಮುಖ್ಯ ಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಇದೀಗ ಬಿಜೆಪಿ ತೊರೆದಿರುವ ಅವರು ಕಾಂಗ್ರೆಸ್ ಸೇರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಿ. ಸುಧಾಕರ್ ಅವರು, ನನಗೂ ಸಿಡಿ ಯುವತಿ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಇದನ್ನು ನೋಡಿ ನನಗೆ ಆಶ್ಚರ್ಯ ಆಗಿದೆ. ನಾನು ಯಾವುದೇ ಹಣದ ವ್ಯವಹಾರ ಮಾಡಿಲ್ಲ ಎಂದು ಹೇಳಿದ್ದಾರೆ.