ರಾಸಲೀಲೆ ಸಿಡಿ ವಿಚಾರಣೆ ಜ್ವರದಿಂದ ಜಾರಿಕೊಂಡ ಜಾರಕಿಹೊಳಿ


ಬೆಂಗಳೂರು,ಏ.೨-ರಾಸಲೀಲೆ ಸಿಡಿ ಪ್ರಕರಣದ ಯುವತಿಯ ಸ್ವ ಇಚ್ಛಾ ಹೇಳಿಕೆ ವೈದ್ಯಕೀಯ ಪರೀಕ್ಷೆ ಸ್ಥಳ ಮಹಜರು ಬಂಧನದ ಭೀತಿಗೆ ಸಿಲುಕಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ವಿಚಾರಣೆಗ ಗೈರಾಗಿದ್ದಾರೆ.
ಯುವತಿಯು ನ್ಯಾಯಾಲಯದ ಎದುರು ಹಾಜರಾಗಿ ಸಿಆರ್‌ಪಿಸಿ ೧೬೪ರಡಿ ಹೇಳಿಕೆ ನೀಡಿ ಎಸ್‌ಐಟಿ ಅಧಿಕಾರಿಗಳ ಮುಂದೆ ೧೬೧ ಅಡಿ ವಿಚಾರಣೆ ಎದುರಿಸಿ ಹಾಗೂ ಮಹಜರು ಪ್ರಕ್ರಿಯೆಗೆ ಸಹಕರಿಸಿದ್ದಾರೆ.
ಈ ಸಂಬಂಧ ಪ್ರಕರಣದ ಆರೋಪಿಯಾಗಿರುವ ರಮೇಶ ಜಾರಕಿಹೊಳಿ ಅವರನ್ನು ಇಂದು ಬೆಳಿಗ್ಗೆ ವಿಚಾರಣೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಸಿದ್ಧವಾಗಿದ್ದರು ಆದರೆ, ರಮೇಶ ಮಧ್ಯಾಹ್ನದವರೆಗೂ ವಿಚಾರಣೆಗೆ ಬರಲಿಲ್ಲ.
ರಮೇಶ್ ಜಾರಕಿಹೊಳಿ ಅವರ ಪರವಾಗಿ ಎಸ್‌ಐಟಿ ಕಚೇರಿಗೆ ಬಂದಿದ್ದ ವಕೀಲ ಶ್ಯಾಮಸುಂದರ್, ರಮೇಶ ಅವರು ನೀಡಿದ್ದ ಪತ್ರವೊಂದನ್ನು ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
’ನನಗೆ ವಿಪರೀತ ಜ್ವರವಿದೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದು, ವಿಶ್ರಾಂತಿ ಪಡೆಯುವಂಯೆ ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ವಿಚಾರಣೆಗೆ ಬರಲು ಆಗುತ್ತಿಲ್ಲ’ ಎಂದು ಪತ್ರದಲ್ಲಿ ಹೇಳಿರುವುದಾಗಿ ಗೊತ್ತಾಗಿದೆ.
ಪತ್ರ ಪಡೆದು ಪರಿಶೀಲನೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಪುನಃ ವಿಚಾರಣೆಗೆ ದಿನಾಂಕ ನಿಗದಿಪಡಿಸಿ ನೋಟಿಸ್ ನೀಡಬೇಕೋ ಅಥವಾ ಬೇರೆ ಕಾನೂನು ಕ್ರಮ ಕೈಗೊಳ್ಳಬೇಕೋ ಎಂಬುದನ್ನು ಯೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಮಾಜಿ ಸಚಿವರು ಕರೆ ಮಾಡಿದ್ದಾರೆ ಎನ್ನಲಾದ ವಾಟ್ಸ್?ಆ?ಯಪ್? ಕಾಲ್, ವಿಡಿಯೋ ಕಾಲ್ ಸ್ಕ್ರೀನ್ ಶಾಟ್ಸ್ ಹಾಗೂ ಕೆಲವೊಂದು ಗಿಫ್ಟ್ ಬಿಲ್?ಗಳನ್ನು ತನಿಖಾಧಿಕಾರಿಗೆ ಯುವತಿಯು ನೀಡಿದ್ದು, ಈ ಎಲ್ಲಾ ಸಾಕ್ಷ್ಯಾಧಾರಗಳ ಆಧಾರದ ಮೇಲೆ ವಿಚಾರಣೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದರು.
ಈ ಹಿಂದೆ ಕೇಳಿದ ಎಲ್ಲ ಪ್ರಶ್ನೆಗಳಿಗೂ ‘ಗೊತ್ತಿಲ್ಲ, ವಕೀಲರನ್ನ ಕೇಳಿ ಹೇಳುತ್ತೇನೆ. ಅದು ನಾನಲ್ಲ.. ಅದು ನಕಲಿ ಸಿಡಿ, ಯುವತಿ ಯಾರು ಎನ್ನುವುದೇ ಗೊತ್ತಿಲ್ಲ’ ಎಂದೇ ಮಾಜಿ ಸಚಿವರು ಉತ್ತರಿಸಿದ್ದರು.