
ವಿಜಯಪುರ,ಏ.೧-ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಸಂತ್ರಸ್ತ ಯುವತಿಯ ಪೋಷಕರನ್ನು ಪೊಲೀಸರು ಇಂದು ಮುಂಜಾನೆ ನಿಡಗುಂದಿಗೆ ಕಳುಹಿಸಿ ಭದ್ರತೆ ಒದಗಿಸಿದ್ದಾರೆ.
ನಿಡಗುಂದಿಯಲ್ಲಿ ಸಂತ್ರಸ್ತ ಯುವತಿಯ ಅಜ್ಜಿಯ ಮನೆಯಿದ್ದು ಅಲ್ಲಿಗೆ ಪೋಷಕರನ್ನು ಪೊಲೀಸರು ತಂದು ಬಿಟ್ಟಿದ್ದಾರೆ.
ಕಳೆದ ಮಾ. ೧೪ರಂದು ಮೊದಲು ಬಾರಿ ಯುವತಿ ಹಾಜರಾಗುವಂತೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ಸಿಬ್ಬಂದಿ ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದರು. ನಂತರ ಸಿಸಿಬಿ ಪೊಲೀಸರು ಯುವತಿ ಸಹೋದರರನ್ನು ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿ ಹೋಗಿದ್ದರು. ಆದರೆ, ಕಳೆದ ಹಲವು ದಿನಗಳಿಂದ ಮನೆ ಬಾಗಿಲು ಮುಚ್ಚಿದ ಕಾರಣ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.
ಈಗ ಸಂತ್ರಸ್ತ ಯುವತಿ ನ್ಯಾಯಾಲಯಕ್ಕೆ ಹಾಜರಾದ ಕಾರಣ ಅವರ ಪೋಷಕರನ್ನು ಇಂದು ನಿಡಗುಂದಿಯ ಅಜ್ಜಿಯ ಮನೆಗೆ ಕರೆ ತಂದು ಬಿಟ್ಟಿದ್ದು, ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಒದಗಿಸಲಾಗಿದೆ.
ಬೆಂಗಳೂರಿಗೆ ಸಾಧ್ಯತೆ:
ತಮ್ಮ ಮಗಳನ್ನು ತಮ್ಮ ಜೊತೆ ಕಳುಹಿಸಿ ಕೊಡಿ ಎಂದು ಅವರ ಪೋಷಕರು ಇಂದು ರಾತ್ರಿ ಬೆಂಗಳೂರಿಗೆ ಹೊರಡುವ ಸಾಧ್ಯತೆಗಳಿವೆ. ನಾಳೆ ಯುವತಿಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಎದುರು ಹಾಜರಾಗಿ ತಮ್ಮ ಮಗಳನ್ನು ತಮಗೆ ಒಪ್ಪಿಸಿ ಎಂದು ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.