ರಾಸಲೀಲೆ ಸಿಡಿ ಯುವತಿಯ ಹೇಳಿಕೆ ರದ್ದು ಕೋರಿ ತಂದೆ ಹೈಕೋರ್ಟ್ ಮೊರೆ

ಬೆಂಗಳೂರು,ಮಾ.31-ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಯುವತಿಯ ತಂದೆ ಹೈಕೋರ್ಟ್ ಮೊರೆ ಹೋಗಿ ತಮ್ಮ ಮಗಳು ಮ್ಯಾಜಿಸ್ಟ್ರೇಟ್ ಎದುರು ನೀಡಿರುವ ಹೇಳಿಕೆ ರದ್ದುಪಡಿಸುವಂತೆ ವಿನಂತಿಸಿ ಕೊಂಡಿದ್ದಾರೆ.
ಯುವತಿಯ ತಂದೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ ತಮ್ಮ ಮಗಳು ನಿನ್ನೆ (ಮಾ. 30)ರಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ನಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ದಾಖಲಿಸಿದ್ದಾಳೆ. ಈ ಹೇಳಿಕೆ ರದ್ದುಪಡಿಸಬೇಕು ಎಂದು 21 ಪುಟಗಳ ರಿಟ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ತಮ್ಮ ಮಗಳು ರಾಜಕೀಯ ವ್ಯಕ್ತಿಗಳ ಪ್ರಭಾವ ಹಾಗೂ ಒತ್ತಡಕ್ಕೆ ಸಿಲುಕಿ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿದ್ದಾಳೆ. ಹೀಗಾಗಿ, ಹೇಳಿಕೆ ಪರಿಗಣಿಸಿದರೆ ಆಕೆಯ ಭವಿಷ್ಯಕ್ಕೆ ಧಕ್ಕೆಯಾಗಲಿದೆ. ಆಕೆಯನ್ನು ಒತ್ತಡಕ್ಕೆ ಸಿಲುಕಿಸಿ ಹೇಳಿಕೆ ಕೊಡಿಸುವ ಮೂಲಕ ತಮ್ಮ ಕುಟುಂಬದ ಗೌರವಕ್ಕೂ ಹಾನಿಯಾಗಿದೆ. ಸಂವಿಧಾನದ ವಿಧಿ 21ರಡಿ ಲಭ್ಯವಿರುವ ಗೌರವಯುತವಾಗಿ ಜೀವಿಸುವ ಹಕ್ಕನ್ನೂ ಉಲ್ಲಂಘಿಸಲಾಗಿದೆ.
ಆದ್ದರಿಂದ ಮಗಳನ್ನು ಕೆಲ ಕಾಲ ನಮ್ಮ ಸುಪರ್ದಿಗೆ ಒಪ್ಪಿಸಬೇಕು ಅಥವಾ ನ್ಯಾಯಾಲಯವೇ ಸೂಕ್ತವೆನ್ನಿಸುವ ಜಾಗದಲ್ಲಿ ಆಕೆಯನ್ನು ಇರಿಸಲು ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.