ರಾಸಲೀಲೆ ಸಿಡಿ ಯುವತಿಗೆ ಎಸ್ಐಟಿ 5ನೇ ನೋಟೀಸ್ ಜಾರಿ

ಬೆಂಗಳೂರು, ಮಾ. 29- ರಾಸಲೀಲೆ  ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯು ನಾಳೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳು ಮತ್ತೆ ನೋಟಿಸ್​ ಜಾರಿ ಮಾಡಿದ್ದಾರೆ.
ಯುವತಿ ಪರ ವಕೀಲ ಜಗದೀಶ್ ಮುಖಾಂತರ ಮೂರನೇ ಬಾರಿ ಹಾಗೂ ಎಸ್ಐಟಿ ಐದು ಬಾರಿ ನೋಟಿಸ್ ಜಾರಿ ಮಾಡಿತ್ತು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ದೂರು ನೀಡಿದ್ದ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ವೈದ್ಯಕೀಯ ಪರೀಕ್ಷೆ:
ಯುವತಿ ವೈದ್ಯಕೀಯ ಪರೀಕ್ಷೆಗಾಗಿ ಹಾಜರಾಗಬೇಕಿದೆ.ಕೃತ್ಯ ನಡೆದ ಸ್ಥಳದ ಬಗ್ಗೆ ಮಹಜರು ಮಾಡಬೇಕಿದೆ. ತನಿಖಾಧಿಕಾರಿ ಮುಂದೆ ಹಾಜರಾಗಿ 161ರಡಿಯಲ್ಲಿ ಹಾಗೂ ಮ್ಯಾಜಿಸ್ಟ್ರೇಟ್ ಮುಂದೆ 164ರಡಿಯಲ್ಲಿ ಹೇಳಿಕೆ ನೀಡಬೇಕಿದೆ. ಅಪರಾಧ ನಡೆದ ಸ್ಥಳ ಗುರುತಿಸುವಿಕೆ, ಪಂಚನಾಮೆ ಸಂದರ್ಭದಲ್ಲಿ ಖುದ್ದು ಹಾಜರಾಗಬೇಕಿರುವ ಅಗತ್ಯವಿರುವುದರಿಂದ ನಾಳೆ ಬೆಳಗ್ಗೆ 10 ಗಂಟೆಗೆ ಕಬ್ಬನ್ ಪಾರ್ಕ್ ಠಾಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದೆ.
ಹೇಳಿಕೆ ದಾಖಲು:
ಪ್ರತ್ಯೇಕ ಸ್ಥಳದಲ್ಲಿ ಹೇಳಿಕೆ ನೀಡಲು ಇಚ್ಛಿಸಿದರೆ ತೆರಳಲು ಸಿದ್ಧ. ನೋಟಿಸ್​ ತಲುಪಿದ ತಕ್ಷಣ ಸ್ಥಳ, ಸಮಯದ ಮಾಹಿತಿ ನೀಡುವುದು ಹಾಗೂ ಸೂಚಿಸಿದ ಸ್ಥಳಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿ ತೆರಳಿ ಯುವತಿಯ ಹೇಳಿಕೆ‌ ದಾಖಲಿಸಿಕೊಳ್ಳಲಿದ್ದಾರೆ.
ಜೀವ ಬೆದರಿಕೆ ಹಿನ್ನೆಲೆ ಯುವತಿಯ ಭದ್ರತೆಗೆ 8 ಜನ ಪೊಲೀಸರ ತಂಡ ಸಿದ್ಧವಾಗಿದೆ. ಎಸ್ಐಟಿಯಿಂದ ಮಹಿಳಾ ಪೊಲೀಸ್ ಸಿಬ್ಬಂದಿ ತಂಡ ರಚನೆ ಮಾಡಲಾಗಿದೆ. ‌ತಂಡದಲ್ಲಿ ಓರ್ವ ಮಹಿಳಾ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ 8 ಮಂದಿ‌‌ ಪೊಲೀಸರಿದ್ದಾರೆ. ಒಂದು ವೇಳೆ ಯುವತಿ ಹೇಳಿದ್ದಲ್ಲಿಗೆ ತೆರಳಿ ಭದ್ರತೆ ನೀಡಲು, ಹೇಳಿಕೆ ದಾಖಲಿಸಿಕೊಳ್ಳಲು ಅಥವಾ ಆಕೆಯೇ ನೇರವಾಗಿ ಹಾಜರಾದರೂ ಭದ್ರತೆ ನೀಡಲಿದೆ‌.