ರಾಸಲೀಲೆ ಸಿಡಿ ಯಾರಿಗೆ ಜೈಲು

ಬೆಂಗಳೂರು,ಮಾ.೩೧-ಕಳೆದ ೨೯ ದಿನಗಳಿಂದ ಕುತೂಹಲ ಕೆರಳಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣವು ವಿವಿಧ ಅಯಾಮಗಳನ್ನು ಪಡೆದು ಕ್ಲೈಮಾಕ್ಸ್ ಹಂತ ತಲುಪಿದೆ.
ಈ ಪ್ರಕರಣದಲ್ಲಿ ಯಾರು ಜೈಲು ಪಾಲಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಈ ಪ್ರಕರಣ ಅತ್ಯಾಚಾರವೊ- ಹನಿಟ್ರಾಪ್‌ವೋ ಎಂಬುದು ಪೊಲೀಸರ ತನಿಖೆ ನಂತರ ಬಯಲಾಗಲಿದೆ.
ಸುಮಾರು ೨೮ ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ಸಂತ್ರಸ್ತ ಯುವತಿಯು ನಿನ್ನೆ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ಹೇಳಿಕೆಯನ್ನು ದಾಖಲಿಸಿ ಕೆಲ ಪೂರಕ ಸಾಕ್ಷ್ಯಾಧಾರಗಳನ್ನು ಒದಗಿಸಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿರುವುದರಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ.
ಸಂತ್ರಸ್ತ ಯುವತಿಯು ನಿನ್ನೆ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ವಿಶೇಷ ತನಿಖಾ ತಂಡ(ಎಸ್ ಐಟಿ)ವಿಚಾರಣೆ ಎದುರಿಸಿ ಇಂದು ಬೆಳಿಗ್ಗೆ ಮತ್ತೆ ವಿಚಾರಣೆಗೆ ಹಾಜರಾದರು.
ಆಡುಗೋಡಿಯಲ್ಲಿರುವ ಸಿಸಿಬಿ ತಾಂತ್ರಿಕ ವಿಭಾಗದಲ್ಲಿ ವಿಚಾರಣೆ ನಡೆಸಿದ ಯುವತಿಯನ್ನು ಅಧಿಕಾರಿಗಳು ವಿಚಾರಣಾ ಕೇಂದ್ರದಿಂದ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.
ತನಿಖಾಧಿಕಾರಿ ಕವಿತಾ ನೇತೃತ್ವದ ತಂಡ ಪ್ರತ್ಯೇಕ ಮೂರು ವಾಹನಗಳಲ್ಲಿ ಬಿಗಿ ಭದ್ರತೆಯೊಂದಿಗೆ ಬೌರಿಂಗ್ ಆಸ್ಪತ್ರೆಗೆ ಯುವತಿಯನ್ನು ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ಉಗುರು ಕೂದಲು ರಕ್ತ ಸೇರಿದಂತೆ ಐದು ಹಂತದ ವೈದ್ಯಕೀಯ ಪರೀಕ್ಷೆ ಬಳಿಕ ಎಸ್?ಐಟಿ ಅಧಿಕಾರಿಗಳು ನೇರವಾಗಿ ಆಡುಗೋಡಿಗೆ ಕರೆತಂದು ಮತ್ತೆ ವಿಚಾರಣೆ ನಡೆಸಿದ್ದಾರೆ.
ವಿಚಾರಣಾ ಕೇಂದ್ರದಲ್ಲಿ ಎಸ್‌ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಅಧಿಕಾರಿಗಳು ಮುಂದಿನ ಹಂತದ ವಿಚಾರಣೆ ನಡೆಸಿ ಯುವತಿಗೆ ರಮೇಶ್ ಜಾರಕಿಹೊಳಿಯ ಪರಿಚಯ ಹೇಗೆ, ಯಾವಾಗ ಭೇಟಿಯಾಗಿದ್ದು ಎಲ್ಲಿ, ಕೃತ್ಯ ಎಸಗಿದ್ದು ಎಲ್ಲಿ, ಶಂಕಿತ ಆರೋಪಿಗಳೊಂದಿಗೆ ಇರುವ ನಂಟಿನ ಬಗ್ಗೆ ಪ್ರಶ್ನಿಸಿ ಯುವತಿಯಿಂದ ಉತ್ತರಗಳ ಮೇಲೆ ಉಪ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.
ಸ್ಥಳ ಮಹಜರು:
ಕೆಲಸ ಕೊಡಿಸುವುದಾಗಿ ಹೇಳಿ ಅಪಾರ್ಟ್‌ಮೆಂಟ್‌ಗೆ ಕರೆಯಿಸಿಕೊಂಡು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಯುವತಿ ದೂರು ನೀಡಿದ್ದರಿಂದ ಎರಡು ಸ್ಥಳಗಳಲ್ಲಿ
ತನಿಖಾಧಿಕಾರಿಗಳು ಯುವತಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಬಂಧನ ಕಡಿಮೆ:
ಪ್ರಕರಣದ ವೇಳೆ ರಮೇಶ್ ಜಾರಕಿಹೊಳಿಯನ್ನು ಬಂಧಿಸಿದರೆ ಜಾಮೀನು ದೊರೆಯುವುದು ಕಷ್ಟವಾಗಿರುವುದರಿಂದ ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಕಡಿಮೆಯಿದೆ.
ಈ ನಡುವೆ ಪ್ರಕರಣದಲ್ಲಿ ಜಾಮೀನು ದೊರಯುವುದು ಕಷ್ಟಕರವಾಗಿರುವುದರಿಂದ ಜಾರಕಿಹೊಳಿ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿಲ್ಲ. ನಿನ್ನೆ ಕೊಲ್ಹಾಪುರ ಮಹಾಲಕ್ಷ್ಮಿ ದರ್ಶನ ಪಡೆದು ರಾತ್ರಿ ನಗರಕ್ಕೆ ವಾಪಾಸಾದ ಜಾರಕಿಹೊಳಿ ಅವರು ವಕೀಲರ ಜೊತೆ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.

ನಲಪಾಡ್ ಸ್ನೇಹಿತನ ಕಾರಿನಲ್ಲಿ ಯುವತಿ

ಅಜ್ಞಾತ ಸ್ಥಳದಲ್ಲಿದ್ದುಕೊಂಡು ವಿಡಿಯೋ ಹೇಳಿಕೆ ಬಿಡುಗಡೆ ಮಾಡುತ್ತಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಯುವತಿಗೆ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಸ್ನೇಹಿತರೊಬ್ಬರು ರಕ್ಷಣೆ ನೀಡುತ್ತಿರುವುದು ಪತ್ತೆಯಾಗಿದೆ.
ನಲಪಾಡ್ ಸ್ನೇಹಿತ ನಫಿ ಮಾಲೀಕತ್ವದ ಕಾರಿನಲ್ಲಿ ಸಿಡಿ ಯುವತಿಯು ಆಡುಗೋಡಿಯ ಟೆಕ್ನಿಕಲ್ ಕೇಂದ್ರದಿಂದ ರಾತ್ರಿ ಅಜ್ಞಾತ ಸ್ಥಳಕ್ಕೆ ಸಂಚರಿಸಿರುವುದು
ಕಂಡುಬಂದಿದೆ
ಯುವತಿಯು ನಫಿ ಮಾಲೀಕತ್ವದ ಟೊಯೊಟಾ ಫಾರ್ಚೂನರ್ ಕಾರಿನಲ್ಲಿ ತೆರಳಿದ್ದು ಕೆಎ ೦೪ ಎಂಯು ೯೨೩೨ ಸಂಖ್ಯೆಯ ಫಾರ್ಚೂನರ್ ಕಾರು ನಫಿ ಮೊಹಮ್ಮದ್ ನಾಸೀರ್ ಹೆಸರಿನಲ್ಲಿದೆ. ೨೦೧೮ರ ಜೂನ್ ೧೨ ರಂದು ಈ ಕಾರು ನೋಂದಣಿಯಾಗಿರುವುದು ಪತ್ತೆಯಾಗಿದೆ.