ರಾಸಲೀಲೆ ಸಿಡಿ ಆರೋಪಿ ಬಂಧನಕ್ಕೆ ಯುವತಿ ಪರ ವಕೀಲರ ಆಗ್ರಹ

ಬೆಂಗಳೂರು,ಮಾ.30-ಸಿಡಿ ಯುವತಿಯು ಧೈರ್ಯವಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದು ಈಗಲಾದರೂ ಪೊಲೀಸರು ಎಚ್ಚೆತ್ತು, ಆರೋಪಿಯನ್ನು ಬಂಧಿಸಿ ಕಾನೂನಿನ ನಿಷ್ಠೆ ತೋರಿಸಬೇಕು’ ಎಂದು ಯುವತಿ ಪರ ವಕೀಲ ಕೆ.ಎನ್. ಜಗದೀಶ್‌ಕುಮಾರ್ ಹೇಳಿದರು.
ಆಡುಗೋಡಿಯಲ್ಲಿರುವ ವಿಶೇಷ ವಿಚಾರಣಾ ಕೊಠಡಿ ಎದುರು ಸುದ್ದಿಗಾರರ ಜೊತೆ ಮಾತನಾಡಿದ ಜಗದೀಶ್‌ಕುಮಾರ್, ‘ಸಿಆರ್‌ಪಿಸಿ ಸೆಕ್ಷನ್ 161ರಡಿ ಧ್ವನಿ ಮಾದರಿ ಸಂಗ್ರಹಿಸಲು ಯುವತಿಯನ್ನು ಎಸ್‌ಐಟಿ ಬಳಿ ಕರೆತರಲಾಗಿದೆ. ಇದು ಕಾನೂನು ಪ್ರಕ್ರಿಯೆ’ ಎಂದರು.
‘ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ. ದೂರು ನೀಡಿಲ್ಲ. ಯುವತಿ ಒತ್ತಡಕ್ಕೆ ಒಳಗಾಗಿದ್ದಾಳೆ ಎಂಬ ಸುದ್ದಿಗಳಿಗೆ ತೆರೆ ಎಳೆದಿದ್ದೇವೆ. ಇದೀಗ ಸರ್ಕಾರ, ಆರೋಪಿಯನ್ನು ಬಂಧಿಸುವತ್ತ ಗಮನ ಹರಿಸಬೇಕು’ ಎಂದೂ ಹೇಳಿದರು.
‘ಪ್ರಕರಣದ ಆರೋಪಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಸಿಆರ್‌ಪಿಸಿ 164ರಡಿ ಈಗಾಗಲೇ ಯುವತಿಯೂ ಹೇಳಿಕೆ ನೀಡಿದ್ದಾರೆ. ಯುವತಿ, ಪ್ರಾಪ್ತರು. ಅವರಿಗೆ ಅವರದ್ದೇ ತೀರ್ಮಾನ ಕೈಗೊಳ್ಳುವ ಸ್ವಾತಂತ್ರ್ಯವಿದೆ’ ಎಂದರು.
ಧ್ವನಿ ಮಾದರಿ ಪರೀಕ್ಷೆಗೆ ಯುವತಿಯನ್ನು ಒಳಪಡಿಸಬೇಕೆಂದು ಎಸ್‌ಐಟಿಯವರು ಮನವಿ ಮಾಡಿದ್ದರು. ಅದಕ್ಕಾಗಿ ಯುವತಿಯನ್ನು ಆಡುಗೋಡಿಯಲ್ಲಿರುವ ತಾಂತ್ರಿಕ ಕೇಂದ್ರಕ್ಕೆ ಕರೆತರಲಾಗಿದೆ’ ಎಂದೂ ಹೇಳಿದರು.