ರಾಸಲೀಲೆ ರಮೇಶ್ ಗೆ ರಕ್ಚಣೆ ಆರೋಪ, ಸಚಿವ ಬೊಮ್ಮಾಯಿ ರಾಜೀನಾಮೆಗೆ ಸಿದ್ದು ಆಗ್ರಹ

ಬೆಂಗಳೂರು, ಮೇ. 27- ರಾಸಲೀಲೆ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಕ್ಷಣೆ ನೀಡುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಗೃಹ ಸಚಿವರಾಗಿ ಮುಂದವರಿಯಲು ಬೊಮ್ಮಾಯಿ ಅವರಿಗೆ ನೈತಿಕ ಹಕ್ಕಿಲ್ಲ. ಕೂಡಲೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವೇ ರಮೇಶ್ ಜಾರಕಿಹೊಳಿಗೆ ರಕ್ಷಣೆ ನೀಡಿದೆ. ಹೀಗಾಗಿ ಅವರು ಅರಾಮಾಗಿ ಸುತ್ತಾಡುತ್ತಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರನ್ನು ರಜೆಯ ಮೇಲೆ ಕಳುಹಿಸಿ ಎಸ್ ಟಿಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ರಕ್ತದೊತ್ತಡ, ಮದುಮೇಹ ಪರೀಕ್ಷೆ ಮಾಡಿ ರಮೇಶ್ ಅವರನ್ನು ಕಳುಹಿಸಿದ್ದಾರೆ.‌ಆದರೆ ಅವರಿಗೆ ‌ಡಿಎನ್ ಎ ಪರೀಕೆ ಮಾಡಿಸಿಲ್ಲ. ಒಪ್ಪಿತ ಲೈಂಗಿಕ ಕ್ರಿಯೆ ನಡೆದಿದೆ ಎಂದು ವಿಚಾರಣೆ ವೇಳೆ‌ ಒಪ್ಪಿಕೊಂಡಿದ್ದಾರೆ.
ಅಲ್ಕದೆ ಅವರಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬ ಕಾರಣಕ್ಕೆ ರಮೇಶ್ ಅವರನ್ನು ಇದುವರೆಗೂ ಬಂಧಿಸಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.
ತಮಗೆ ಬಂದಿರುವ ಮಾಹಿತಿ ಅನುಸಾರ ರಮೇಶ್ ಅವರು ಹುಬ್ಬಳ್ಳಿಯಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ ಪ್ರಕರಣ ಕುರಿತು ಚರ್ಚಿಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ‌ಭೇಟಿ ಮಾಡಿದ್ದಾರೆಂದು ಹೇಳಿದರು.