ರಾಷ್ಟ್ರ ವಿರೋಧಿ ಬ್ರಾಂಡ್ ಅಪಾಯಕಾರಿ

ನವದೆಹಲಿ,ಏ.೧೪- ದೇಶದಲ್ಲಿ ಬಲವಂತದಿಂದ ಜನರ ಬಾಯಿ ಮುಚ್ಚಿಸುವುದು ಮತ್ತು ರಾಷ್ಟ್ರ ವಿರೋಧಿ ಎಂದು ಬ್ರಾಂಡ್ ಮಾಡುವುದು ಅಪಾಯಕಾರಿ ಬೆಳವಣಿಗೆ ಮತ್ತು ಪ್ರಜಾಪ್ರಭುತ್ಬಕ್ಕೆ ಮಾರಕ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ರೀತಿಯ ಪ್ರವೃತ್ತಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿ ಸಂವಿಧಾನವನ್ನು ನಾಶಗೊಳಿಸುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹತ್ವದ ಕುರಿತು ಟ್ವಿಟರ್‌ನಲ್ಲಿ ವಿಡಿಯೊ ಸಂದೇಶ ನೀಡಿದ್ದಾರೆ.
ಯಾವುದೇ ನಾಯಕನ ಆರಾಧನೆ ಮತ್ತು ಭಕ್ತಿಯ ದುಷ್ಪರಿಣಾಮಗಳ ಕುರಿತು ಅಂಬೇಡ್ಕರ್ ಈ ಹಿಂದೆಯೇ ಎಚ್ಚರಿಸಿದ್ದರು ಎಂದು ಹೇಳಿದ ಅವರು ಆಡಳಿತ ಪಕ್ಷದ ನಡೆಯನ್ನು ತೀಕ್ಷ್ಮವಾಗಿ ಖಂಡಿಸಿದ್ದಾರೆ. ಸಂಸತ್ತನ್ನು ಚರ್ಚೆಗಿಂತ ಹೋರಾಟದ ಅಖಾಡವಾಗಿ ಆಡಳಿತ ಪಕ್ಷ ಬದಲಾಯಿಸಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
‘ಧರ್ಮದ ಪ್ರಕಾರ ಭಕ್ತಿ ಮೋಕ್ಷದ ದಾರಿಯಾಗಿದೆ. ಆದರೆ, ರಾಜಕೀಯದಲ್ಲಿ ಭಕ್ತಿ ಅಥವಾ ನಾಯಕನ ಆರಾಧನೆ ದೇಶದ ಅವನತಿಗೆ ದಾರಿಯಾಗಲಿದೆ. ಅಂತಿಮವಾಗಿ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡಲಿದೆ’ ಎಂದು ಅಂಬೇಡ್ಕರ್ ಹೇಳಿದ ಮಾತನ್ನು ಪುನರುಚ್ಛರಿಸಿದ್ದಾರೆ.
‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ಅವರ ಅಪಾರ ಕೊಡುಗೆಗೆ ನಾವು ಗೌರವಪೂರ್ವಕವಾಗಿ ನಮಸ್ಕರಿಸುತ್ತೇವೆ. ಬಾಬಾಸಾಹೇಬರು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ಪ್ರಜಾಸತ್ತಾತ್ಮಕ ತತ್ವಗಳ ‘ಚಾಂಪಿಯನ್’ ಆಗಿದ್ದರು. ನಾವೆಲ್ಲರೂ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಗೌರವಿಸುತ್ತೇವೆ’ ಎಂದು ತಿಳಿಸಿದ್ದಾರೆ.
‘ಪ್ರಜಾಪ್ರಭುತ್ವದ ಅವನತಿಗೆ ಅವಕಾಶ ನೀಡುತ್ತೇವೆಯೇ ಅಥವಾ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತೇವೆಯೇ ಎಂಬ ಆಯ್ಕೆ ನಮ್ಮ ಕೈಯಲ್ಲಿದೆ’ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.