ರಾಷ್ಟ್ರ ರಕ್ಷಣೆ, ಪ್ರಗತಿ ನಮ್ಮೆಲ್ಲರ ಧ್ಯೇಯವಾಗಬೇಕು: ಮಲ್ಲಿನಾಥ ಮಹಾರಾಜ

ಭಾಲ್ಕಿ:ಅ.3:ದೇಶದ ರಕ್ಷಣೆ, ಪ್ರಗತಿಯೇ ನಮ್ಮೆಲ್ಲರ ಧ್ಯೇಯವಾಗಬೇಕು ಎಂದು ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರು ಹೇಳಿದರು.
ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿಯ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಯುವಶಕ್ತಿ ಹೊಂದಿರುವ ನಮ್ಮ ರಾಷ್ಟ್ರ ಇತರ ದೇಶಗಳಿಗೆ ಮಾದರಿ ಆಗಿದೆ. ಯುವಶಕ್ತಿ ದೇಶದ ಅಮೂಲ್ಯ, ಶಾಶ್ವತ ಸಂಪತ್ತಾಗಿದೆ. ಹಾಗಾಗಿ, ಯುವಕರು, ವಿದ್ಯಾರ್ಥಿಗಳು ದುಶ್ಚಟ, ದುರ್ಗುಣಗಳಿಂದ ದೂರವಿದ್ದು, ಸಚ್ಚಾರಿತ್ರ್ಯ, ಸದ್ಗುಣಗಳನ್ನು ಮೈಗೂಡಿಸಿಕೊಂಡು ದೇಶ ಸೇವೆಗೆ ಸದಾ ಸಿದ್ಧರಿರಬೇಕು ಎಂದು ತಿಳಿಸಿದರು.
ಜಹೀರಾಬಾದ್‍ನ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವದೂತರು ಮಾತನಾಡಿ, ಮಹಾತ್ಮ ಗಾಂಧಿ, ಶಾಸ್ತ್ರಿ ಅವರ ನಿಸ್ವಾರ್ಥ ದೇಶ ಸೇವೆ, ತ್ಯಾಗದ ಫಲದಿಂದ ದೇಶ ಸ್ವಾತಂತ್ರ್ಯಗೊಂಡಿದೆ ಎಂದರು.
ಜಗದ್ಗುರು ನಿರಂಜನ ಸಂಸ್ಥಾನ ಮಠದ ಶಿವಯೋಗೇಶ್ವರ ಸ್ವಾಮೀಜಿ ಮಾತನಾಡಿ, ಹವಾ ಮಲ್ಲಿನಾಥ ಮಹಾರಾಜರು ಜನರಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಶ್ರಮಿಸುತ್ತಿರುವುದು ಮಾದರಿ ಕಾರ್ಯ ಎಂದರು.
ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಎಲ್ಲರೂ ಸಪಾಲಿಸಬೇಕು ಎಂದು ನುಡಿದರು.
ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ರಾಷ್ಟ್ರಧರ್ಮ ಎಲ್ಲ ಧರ್ಮಗಳಿಗಿಂತಲೂ ಮಿಗಿಲು ಎಂದು ಹೇಳಿದರು.
ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಿಂದ ಡಿಜೆ ಸೌಂಡ್‍ನಲ್ಲಿ ಮೊಳಗಿದ ದೇಶಭಕ್ತಿ ಗೀತೆ, ಸಿಡಿಮದ್ದುಗಳ ಸದ್ದಿನೊಂದಿಗೆ ಭಾರತಾಂಬೆ, ಸ್ವಾತಂತ್ರ್ಯ ಹೋರಾಟಗಾರರ, ಎಲ್ಲ ಧರ್ಮಗಳ ಮಹಾತ್ಮರ ಭಾವಚಿತ್ರದ ಮೆರವಣಿಗೆ ಆರಂಭಗೊಂಡು ಗ್ರಾಮದ ಪ್ರಮುಖ ವೃತ್ತಗಳ ಮೂಲಕ ಸಾಗಿ ಭವಾನಿ ಕಲ್ಯಾಣ ಮಂಟಪದಲ್ಲಿ ಸಮಾಪ್ತಿಗೊಂಡಿತು. ಕುಂಭಕಳಸ ಹೊತ್ತ ಮುತೈದೆಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಯ ಕಳೆ ಹೆಚ್ಚಿಸಿದರು.
ಇದೇ ಸಂದರ್ಭದಲ್ಲಿ ಪೆÇಲೀಸ್ ಇಲಾಖೆ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ರೈತ ಪ್ರಮುಖರನ್ನು ಸನ್ಮಾನಿಸಲಾಯಿತು.
ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿ ತಾಲ್ಲೂಕು ಅಧ್ಯಕ್ಷ ಪಪ್ಪು ಪಾಟೀಲ ಸ್ವಾಗತಿಸಿದರು.