ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು: ಎ.ಆರ್.ಕೃಷ್ಣಮೂರ್ತಿ

ಸಂಜೆವಾಣಿ ವಾರ್ತೆ
ಚಾಮರಾಜನಗರ.ಡಿ.31- ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯಪೂರ್ವದಲ್ಲಿ ದೇಶದಲ್ಲಿ ಶಿಕ್ಷಣ ಪಡೆಯಲು ಅವಕಾಶ ಕಡಿಮೆಇತ್ತು. ಆದರೆ, ಸ್ವಾತಂತ್ರ್ಯ ನಂತರ ಅಂಬೇಡ್ಕರ್ ರಚಿಸಿದ ಸಂವಿಧಾನದ ಪರಿಣಾಮ ಶಿಕ್ಷಣ ಎಲ್ಲರಿಗೂ ಸಿಗುವಂತಾಯಿತು. ಶಿಕ್ಷಕರು ಮಕ್ಕಳಲ್ಲಿ ಶೈಕ್ಷಣಿಕವಾಗಿ ಜ್ಞಾನತುಂಬುವ ಕೆಲಸ ಮಾಡಬೇಕು. ರಾಜ್ಯದಲ್ಲಿ ಜಿಲ್ಲೆಯು ಎಸ್ಸೆಸ್ಸೆಲಿ ಫಲಿತಾಂಶದಲ್ಲಿ 8ನೇ ಸ್ಥಾನ ಪಡೆಯುವಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
ಶಿಕ್ಷಕರು ಸರ್ಕಾರದ ಇತರೆ ಯೋಜನೆಗಳ ಕೆಲಸ ಕಾರ್ಯಗಳನ್ನು ಮಾಡ ಬೇಕಿರುವಕಾರಣ ಪಾಠ ಪ್ರವಚನ ಮಾಡುವಲ್ಲಿ ತೊಡಕುಂಟಾಗುತ್ತಿದೆ. ಮಕ್ಕಳು ಕಲಿತರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮೈಯೆಲ್ಲ ಕಣ್ಣಾಗಿಕಾರ್ಯನಿರ್ವಹಿಸುವ ಜವಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರ ಸಮಸ್ಯೆಗಳ ಪರವಾಗಿ ನಾನು ಕೂಡ ಧ್ವನಿಯಾಗಿದ್ದೇನೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಕ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಓದು, ಬರಹ, ಗಣಿತ ಕಲಿಸುವಿಕೆ ಬಹಳ ಮುಖ್ಯ. ಈ ಕಲ್ಪನೆಗಳನ್ನು ಮಕ್ಕಳಲ್ಲಿ ಬಿತ್ತುವ ನಿಟ್ಟಿನಲ್ಲಿ ಶಿಕ್ಷಕರು ಮುಂದಾಗಬೇಕು.
ಮೊದಲು ಮಕ್ಕಳ ಮನಸ್ಸನ್ನುಗೆದ್ದು ಆ ನಂತರ ಕಲಿಕೆಗೆ ಪ್ರಯೋಗ ಮಾಡಬೇಕು. ಶಿಕ್ಷಕರ ಸಮಸ್ಯೆ, ಶಾಲಾ ಕೊಠಡಿಗಳ ಸಮಸ್ಯೆ, ಮೂಲ ಸೌಕರ್ಯಗಳ ಕುರಿತು ಬಗೆಹರಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರು ಹಾಗೂ ಉತ್ತಮ ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿಕರ್ನಾಟಕರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷಕೆ.ನಾಗೇಶ್, ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಡಯಟ್ ಪ್ರಾಂಶುಪಾಲ ಕಾಶಿನಾಥ್, ಡಯಟ್‍ಉಪನ್ಯಾಸಕ ಲಿಂಗರಾಜೇಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಸೇರಿದಂತೆ ಇತರರಿದ್ದರು.