ರಾಷ್ಟ್ರ ಕವಿ ಕುವೆಂಪು ಕನ್ನಡದ ಮೊದಲ ಮಾನವೀಯ ಸಾಹಿತಿ : ಸುರೇಶ ಬಡಿಗೇರ

ಕಲಬುರಗಿ:ಡಿ.29: ರಾಷ್ಟ್ರಕವಿ ಕುವೆಂಪು ಅವರು ಮೌಢ್ಯತೆಯ ಇಬ್ಬರು ವಿರೋಧಿಗಳಾಗಿದ್ದರು. ತಮ್ಮ ಸಾಹಿತ್ಯದ ಮೂಲಕ ಅನೇಕ ಮೌಢ್ಯ ವಿರೋಧಿ ಲೇಖನಗಳನ್ನು ನಾಡಿಗೆ ನೀಡುವ ಮೂಲಕ ಜೊತೆಗೆ ಸಂದೇಶ ಸಾರುವ ಮೂಲಕ ನೊಂದವರ ಧ್ವನಿಯಾಗಿ ಬದುಕಿದ್ದರು. ಹಾಗೆ ನೊಡಿದರೆ ವ್ಯವಸ್ಥೆಯ ವಿರುದ್ಧ ಮತ್ತು ಮೌಢ್ಯತೆ ವಿರುದ್ಧ ಮೊಟ್ಟಮೊದಲ ಸಾಹಿತ್ಯವನ್ನು ರಚಿಸಿದ ಕುವೆಂಪು ಅವರು ಕನ್ನಡ ಸಾಹಿತ್ಯ ಲೋಕದ ಮೊದಲನೆಯ ಮಾನವೀಯ ಸಾಹಿತಿಯಾಗಿದ್ದರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಉಪನ್ಯಾಸಕರಾಗಿ ಮಾತನಾಡಿದರು.
ನಗರದ ಡಾ. ಎಸ್.ಎಂ. ಪಂಡಿತ ರಂಗಮಂದರಿದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್, ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು. ಕರ್ನಾಟಕ ಸರ್ಕಾರ ಕೊಡಮಾಡುವ ಪಂಪ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊಟ್ಟಮೊದಲಿಗರಾಗಿ ಕುವೆಂಪು ಅವರಿಗೆ ನೀಡಲಾಗಿತ್ತು. ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಅವರು ಯಾವ ವಿಶ್ವವಿದ್ಯಾಲಯದಲ್ಲಿ ತಮ್ಮ ಪದವಿಯನ್ನು ಮುಗಿಸಿದ್ದರೆಯೋ ಅದೇ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದು ಅವಿಸ್ಮರಣಿಯ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಶ್ರೀರಾಮಾಯಣ ದರ್ಶನಂದಲ್ಲಿ ಬರುವ ಸಣ್ಣ ಸಣ್ಣ ಪಾತ್ರಗಳಿಗೆ ವಿಶೇಷವಾಗಿ ನೊಂದ ಜನರಿಗೆ ಶಕ್ತಿತುಂಬುವ ಕೆಲಸವನ್ನು ಕುವೆಂಪು ಅವರು ಮಾಡಿದ್ದಾರೆ ಎಂದು ಹೇಳಿದರು.
ಸೆಂಟ್ ಜೋಸೆಫ್ ಕಾಲೇಜಿನ ಉಪನ್ಯಾಸಕರು ಹಾಗೂ ಸಾಹಿತಿ ಡಾ. ಚಿ.ಸಿ. ಲಿಂಗಣ್ಣ ಮಾತನಾಡಿ, ಬರಹದ ಮೂಲಕ ಸಂದೇಶ ಸಾರಿದ ಕುವೆಂಪು ಸರ್ವರಿಗೆ ಸಮಬಾಳು ಸಮಪಾಲು ಸಂದೇಶವನ್ನು ತಿಳಿಸಿದ ದರ್ಶನಿಕ ಕವಿ ಕನ್ನಡ ಅಸ್ಮಿತೆಯನ್ನು ಜಗತ್ತಿಗೆ ತಿಳಿಸಿಕೊಟ್ಟ ಮಹಾನ್ ಚೇತನ, ವಿಶ್ವಮಾನವ ಕುವೆಂಪು ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಶಿಷ್ಠಾಚಾರದ ತಹಸೀಲ್ದಾರರಾದ ನೀಸಾರ್ ಅಹ್ಮದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ರಾಷ್ಟ್ರ ಕವಿ ಕುವೆಂಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು.ವೇದಿಕೆ ಮೇಲೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಿವಶರಣಪ್ಪ ಮೂಳೆಗಾಂವ, ಸತ್ಯಂ ಪಿಯೂ ಕಾಲೇಜಿನ ಪ್ರಾಚಾರ್ಯ ಹಾಗೂ ಸಾಹಿತಿ ಬಿ.ಎಸ್. ನಿರಗುಡಿ, ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭಕ್ಕೆ ಕವಿತಾ ಮಠಪತಿ ಹಾಗೂ ಷಣ್ಮೂಖ ಅವರಿಂದ ಕುವೆಂಪು ರಚಿತ ಕವನಗಳನ್ನು ಗೀತಗಾಯನ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಖಣದಾಳ ಪ್ರೌಢಶಾಲೆ ಶಿಕ್ಷಕಿ ಪರ್ವಿನ ಸುಲ್ತಾನ, ಗೀತಾ ಕುಲ್ಕರ್ಣಿ, ನಾಗರಾಜ ಸಣ್ಣೂರ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಭಾಗವಹಿಸಿದ್ದರು.